ಕ್ವಚಿದಪಿ ಕುಮಾತಾ ನ ಭವತಿ...

ಹೆತ್ತು- ಹೊತ್ತು ಸಲಹಿದ ಮಗನೊಂದಿಗೆ ಬದುಕಲು ಬಯಸುವುದೂ ಮರೀಚಿಕೆಯಾಯಿತೆ? ಉತ್ತರವಿಲ್ಲದ ನೂರು ಒಗಟುಗಳ ಗೊಂದಲಗಳ ಸುಳಿಯಲ್ಲಿ ಸಿಲುಕಿ, ಸಮಸ್ಯೆಗಳ ಸಾಗರವನೀಜುವುದು ಅಷ್ಟೊಂದು ಸುಲಭವೆ? ಭಾವಗಳ ಪ್ರಪಂಚದಲ್ಲಿ ಬದುಕುವವಳಿಗೆ ಬವಣೆಯೇ ಗತಿಯೆ? ತುಂಬಿದ ಸಮಾಜವನ್ನೆದುರಿಸಿ, ರಕ್ತ ಸುರಿಸಿ ಬೆಳೆಸಿದ್ದಕ್ಕೆ ಇದೇ ಬಹುಮಾನವೆ? ಒಂದು ಗಂಡು ಜೀವದ ಹಂಗಿಲ್ಲದೆ, ಆ ಕೊರತೆಯೂ ಕಾಣದಂತೆ ಮಮತೆಯ ಮಳೆಗೈದಿದ್ದಕ್ಕೆ ಸರಿಯಾದ ಪಾರಿತೋಷಕವೇ ಕೊಟ್ಟೆ..! ನನಗೆ ನೀನು ನನ್ನ ಮಗನೆಂಬುದಷ್ಟೆ ನೆನಪಿತ್ತು, ನೀನು ಅದೇ ತಂದೆಯ ಮಗನೂ ಅಲ್ಲವೇ?
ಒಡಲಾಳದಲ್ಲಿ ಧಗಧಗಿಸುವ ಜ್ವಾಲಮುಖಿಯ ಬಚ್ಚಿಟ್ಟು, ತುಟಿಗಳ ಮೇಲೆ ನಗು ತುಂಬಿಕೊಂಡು ಈ ಸಮಾಜವನ್ನೆದುರಿಸುವುದು... ಮುಳ್ಳು ತಂತಿಯನ್ನು ಮೈ ತುಂಬ ಕಟ್ಟಿಕೊಂಡಂತೆ! ಕಂಗಳಿಂದ ಸುರಿಯುವುದು ನೀರಲ್ಲ, ರಕ್ತ ಎಂದೆನಿಸುವಷ್ಟರ ಮಟ್ಟಿಗಿನ ವೇದನೆಯನ್ನು ಸಹಿಸಿಕೊಳ್ಳಬೇಕೆಂದು ನಿರೀಕ್ಷಿಸುವಷ್ಟರ ಮಟ್ಟಿಗೆ ನಿನ್ನ ಕಂಗಳಲ್ಲಿ ನಾ ಶಕ್ತಿವಂತೆ!! ದೇವರೆಂದು ಹೇಳಿ, ರಾಶಿ ಕೆಂಡವನು ಮಡಿಲಲ್ಲಿ ಸುರಿದು, ಹಾರೈಸು ಎಂದು ದೀನನಾಗಿ ನಿಂತಿರುವದ ನೋಡಿಯೂ ನಾ ಹೇಗೆ ಕಣ್ಣೀರಿಡಲಿ? ನಿನ್ನಿಂದಲೇ ಈ ನೋವು ಎಂದು ಹೇಗೆ ಹೇಳಲಿ? ನೀನೀಗ ಸಮಾಜದಲ್ಲಿ ತಲೆಯೆತ್ತಿ ನಿಲ್ಲಬೇಕೆಂಬ ಒಂದೇ ಕಾರಣಕ್ಕೆ ನನ್ನ ಜೀವನದ ಹೊತ್ತಿಗೆಯನ್ನು ತೆರೆದಿಡಬೇಕಷ್ಟೇ.... ಬದುಕಿನ ಈ ಮುಸ್ಸಂಜೆಯ ಕ್ಷಣದಲ್ಲಿ, ಹೆತ್ತ ಮಗನಿಗೆ, ಈ ಸಮಾಜಕ್ಕೆ ನನ್ನ ನಿಲುವುಗಳಿಗೆಲ್ಲ ಪುಷ್ಟೀಕರಣ ಕೊಡಬೇಕಾಗಿದೆ.. ನಂಬಿದ ಸಿದ್ಧಾಂತಗಳಿಗೆ ಎಳ್ಳು ನೀರು ಬಿಡಬೇಕಾಗಿದೆ...
ಈಗ ಮತ್ತೇನಿಲ್ಲ, ಸುಡುವ ಕೆಂಡವನು ತಂಪು ಮಂಜೆಂದು ಭ್ರಮಿಸಿ ಮಂದಹಾಸದೊಂದಿಗೆ ಪ್ರೀತಿಯನು ಮೊಗೆಮೊಗೆದು ಕೊಡಬೇಕಷ್ಟೆ. ಹುಚ್ಚು ಪದಗಳು ಒಟ್ಟೊಟ್ಟಿಗೆ ಹೆಣೆದು ಮನಸಿನ ತೆವಲನ್ನು ತೀರಿಸಿಕೊಂಡತಾಯಿತೇ ವಿನಃ ನನ್ನಂತರಾಳದ ಒಂದಕ್ಷರವೂ ನಿನ್ನನ್ನು ತಲುಪಲಿಲ್ಲ, ತಲುಪುವುದೂ ಬೇಡ!!!!!
-ನಿಷಾದ

Comments

Post a Comment

Popular Posts