ಜನ ಮರಳೋ, ಜಾತ್ರೆ ಮರುಳೋ!



ಜನ ಮರಳೋ, ಜಾತ್ರೆ ಮರುಳೋ!

ಈ ಗಾದೆ ಮತ್ತನ್ನು ನಾವೆಲ್ಲರೂ ಕೇಳಿಯೇ ಇರುತ್ತೇವೆ. ನನ್ಹತ್ರ ಇದ್ಕಕೊಂದು ಉತ್ತರ ಇದೆ; ಜನರಿಗೆ ಜಾತ್ರೆಯ ಮರುಳು!

ನಮ್ಮೂರಲ್ಲಿ ಜಾತ್ರೆ,ಇವತ್ತು ಕೊನೆಯ ದಿನ. ನಾನ್ನೂರು ಮೈಲಿ ದೂರ ಕುಳಿತು, ನನ್ನಷ್ಟೇ ಎತ್ತರದ ಕಡತಗಳ ರಾಶಿಯ ನಡುವೆ, ಕಪ್ಪು - ಬಿಳುಪು ಜೀವನವ ಬದುಕುತ್ತಿರುವ ನನ್ನ ಕಣ್ಣುಗಳಲ್ಲಿ ಬಣ್ಣಗಳ ಝಲುಕು. ಸ್ಮೃತಿ ಪ್ರವಾಹದಲ್ಲಿ ನಾನು ಕೊಚ್ಚಿ ಹೋಗುವುದಕ್ಕಿಂತ, ಭಾವಗಳ ಶಾಯಿಯಿಂದ ನಿಮ್ಮ ಮನಸ ಹಾಳೆಗಳಲ್ಲಿ ಬರೆದು, ನೆನಪುಗಳ ಮಳೆಯನ್ನು ಸುರಿಸಿ ನಿರಾಳವಾಗುವ ಎಂದು ಬರೆಯುತ್ತಿದ್ದೇನೆ. 

ಜಾತ್ರೆ ಶುರುವಾಗುವ ವಾರಗಳ ಮೊದಲು 'ಮಾರಿಕೋಣ' ಮನೆ- ಮನೆಗೆ ಬಂದು ದೇಣಿಗೆ ಪಡೆಯುವ ಆಚಾರವಿದೆ. ಶಾಲೆಗೆ ಅವತ್ತು ರಜೆಯಿತ್ತು. ಮಟ-ಮಟ ಮಧ್ಯಾಹ್ನ ಮಾರಿಕೋಣ ಮನೆಗೆ ಬಂದಿದ್ದು ನೆನಪಿದೆ. ಮಾರಿಕೋಣನ ಹೆದರಿಕೆ ಹುಟ್ಟಿಸುವ ಆಳ್ತನ, ಕೊಂಬುಗಳು ಇನ್ನೂ ನೆನಪಿನಲ್ಲಿವೆ. ನನ್ನ ನೆನಪಿನ ಜಾತ್ರೆ ಶುರುವಾಗುವುದೂ ಅಲ್ಲಿಂದಲೇ.  

ಜಾತ್ರೆಯ ಬಗ್ಗೆ ಯಾವುದಾದರೂ ಅಜ್ಜಿಯ ಹತ್ರ ಕೇಳಿ ನೋಡಿ: "ಎಷ್ಟ್ ಜಾತ್ರೆ ನೋಡಿದ್ನೇನ, ಪ್ರತಿ ಸಲನೂವ ಅದೇ ಬಳೆಪ್ಯಾಟೆ, ಅದೇ ತೊಟ್ಲು, ಅದೇ ಮಳ್ಳು ಮಳ್ಳು ನಾಟ್ಕ. ನಿಂಗಕಿಗೆ ಬೇಜಾರೇ ಬತ್ತಿಲ್ಯನ್ರ?" ಹೇಳಿ ಹೇಳದಿದ್ದರೆ ಕೇಳಿ. ನಿಜ, ಎಲ್ಲಾ ಸಾರಿಯೂ ಹೆಚ್ಚು ಕಡಿಮೆ ಒಂದೇ ರೀತಿಯ ಅಂಗಡಿಗಳು, ದೈತ್ಯ ತೊಟ್ಟಿಲುಗಳು, ಯಕ್ಷಗಾನ - ನಾಟಕಗಳು. ಬಳೆ - ಝುಮಕಿಗಳ ವಿನ್ಯಾಸ ಬದಲಾಗಬಹುದು, ಹೊಸ ಹೊಸ ರೋಚಕ ಆಟಗಳು ಬರಬಹುದು, ಹೊಸ ಕಥೆಗಳು ರಂಗಕ್ಕೆ ಕಾಲಿಡಬಹುದು. ಆದರೆ ಯಥಾರ್ಥದಲ್ಲಿ ಎಲ್ಲವೂ ಹೊಸ ಅಂಗಿಯ ತೊಟ್ಟ ಹಳೆ ಗಂಡಂದಿರ ಹಾಗೆಯೇ. ಆದರೂ ಯಾಕೆ ಪ್ರತೀ ಬಾರಿ ಜಾತ್ರೆ ಎಂದಾಗ ಅಷ್ಟು ಉತ್ಸಾಹ, ಎಂದು ನಾನು ಆಲೋಚಿಸಿದ್ದುಂಟು. ಈಗ ನನಗೆ ಹೊಳೆದಿದ್ದು - ವರ್ಷಗಳು ಕಳೆದಂತೆ ಜಾತ್ರೆ ಬದಲಾಗದಿದ್ದರೂ, ನಾವು ಬದಲಾಗುತ್ತಿದ್ದೆವು, ಆದ್ದರಿಂದಲೇ ಪ್ರತಿ ಬಾರಿ ಜಾತ್ರೆಯ ನೋಡುವ, ಅನುಭವಿಸುವ, ಆನಂದಿಸುವ ಬಗೆ ಹೊಸದಾಗುತ್ತಿತ್ತು. 

ಪ್ರತಿಬಾರಿಯೂ ಜಾತ್ರ್ಯಲ್ಲಿ ನಮ್ಮ ಆಸಕ್ತಿ ಕೇಂದ್ರಗಳು ಬದಲಾಗುತ್ತಿದ್ದವು. ನಾಲ್ಕನೇ ಕ್ಲಾಸಲ್ಲಿ ನಾನಿದ್ದೆ, ಜಾತ್ರೆ ಇತ್ತು. ಇನ್ನೂ ನೆನಪಿದೆ, ದೇವಿಕೆರೆಯನ್ನು ಖಾಲಿ ಮಾಡಿಸಿ ಅಂಗಡಿ ಹಾಕಿಸಿದ್ದರು. ಜೀವನದ ಮೊದಲ 'ಗೋಬಿ ಮಂಚೂರಿಯನ್' ತಿಂದಿದ್ದು, ಮುದ್ರೆಯೊತ್ತಿದಂತೆ ಸ್ಪಷ್ಟವಿದೆ. ಆ ಜಾತ್ರೆಯಲ್ಲಿ ಗೋಬಿ ಮಂಚೂರಿ ತಿಂದಿದ್ದೂ, 'ರಾಂಬೊ ಸರ್ಕಸ್' ನೋಡಿದ್ದೂ ಸ್ಮರಣೀಯ ಘಟನೆಗಳು. ಅದರ ಹಿಂದಿನ ಜಾತ್ರೆಯಲ್ಲಿ ದೀಪ ಹಚ್ಚಿದರೆ ನೀರಿನಲ್ಲಿ ಚಲಿಸುವ ಪುಟ್ಟ ದೋಣಿ ಬಹಳ ಜನಪ್ರಿಯವಾಗಿತ್ತು. ಮನೆಗೆ ಅದು ಕೊಂಡುಬಂದ ಕೆಲವೇ ತಾಸುಗಳಲ್ಲಿ ನಾನು - ನನ್ನಕ್ಕ ಜಗಳವಾಡಿ ಅದ್ಕಕೊಂದು ಗತಿ ಕಾಣಿಸಿದ್ದು ಇನ್ನೂ ಮನದಲ್ಲಿ ಹಸಿರಾಗಿದೆ. 

ಇನ್ನು ಕೆಲವೊಂದು ಆಟಿಕೆ, ಸಾಮಾಗ್ರಿಗಳಿರುತ್ತವೆ. ಅವು ಜಾತ್ರೆಯ ಮಧ್ಯದಲ್ಲಿ, ಜನರ ನಡುವೆ ಬಲು ಚಂದ. ಆದರೆ ಬೆಲೆ ಕೊಟ್ಟು ಕೊಂಡುಕೊಂಡು ಮನೆಗೆ ಹೋಗಿ ಏನೆಲ್ಲಾ ಕಸರತ್ತು ಮಾಡಿದ್ದರೂ, ಅದು ತನ್ನ ಜೀವನೋದ್ದೇಶವನ್ನು ಪೂರ್ತಿಗೊಳಿಸುವುದಿಲ್ಲ. ಕೊಳಲು, ಹಾರುವ ಹೆಲಿಕಾಪ್ಟರ್, ಬಟ್ಟೆಗಳ ಮೇಲೆ ಬಿಡಿಸುವ ಚಿತ್ತಾರದ ಅಚ್ಚುಗಳು ಹೀಗೆಯೇ. ಪ್ರತಿ ಜಾತ್ರೆಗೂ ಈ ಸಾಮಾನುಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತವೆ. ಒಮ್ಮೆ ನಾನು ಈ ಕೊಳಲು ಮಾರುವವರ ಹತ್ರ ಹೇಳಿದೆ, "ಇದನ್ನ ತಗೊಂಡ್ರೆ ಇದ್ರ ಜೊತೆ ನೀವೂ ಬರ್ಬೇಕಾಗ್ತದೆ ಮಾರಾಯ್ರೇ, ಇದನ್ನ ಬಾರಿಸಲಿಕ್ಕೆ. ನೀವಿಲ್ಲದೆ ಇದು ಯೂಸ್ಲೆಸ್" ಎಂದು. 


ಚಿಕ್ಕವರಿದ್ದಾಗ ಅಮ್ಮನ ಜೊತೆಗೆ ಸುಮಾರು ೪ ಘಂಟೆಗೆ ಹೋಗಿ ಸಂಜೆ ಎಂಟಾಗುವಷ್ಟರಲ್ಲಿ ಮನೇಲಿರುತ್ತಿದ್ದೆವು. ಆ ಜನಜಂಗುಳಿಯಲ್ಲಿ ಅಮ್ಮನ ಕೈ ಬಿಡದೇ ನಡೆಯುವುದೇ ಸಾಹಸವಾಗಿತ್ತು. "ಕೈ ಗೆನ್ಚ್ ಹಾಕ್ಯಂಡೆ ಇರವು", ಅಪ್ಪಯ್ಯ ಹೇಳಿದ ಮಾತು ಚಾಚೂ ತಪ್ಪದೆ ಪಾಲಿಸುತ್ತಿದ್ದೆವು. ಆದರೂ ಅಮ್ಮ ಬಕೆಟ್ಟು, ಟಬ್ಬು, ಪಾತ್ರ, ಬಚ್ಚಲು ತೊಳೆಯುವ ಬ್ರಷ್ಷು ಮೊದಲಾದ ಅಮೂಲ್ಯವಾದ ಸಾಮಾಗ್ರಿಗಳನ್ನು ಚೌಕಾಶಿ ಮಾಡಿ ಖರೀದಿ ಮಾಡುವಾಗ ಗಮನ ತಪ್ಪಿ ಗಲಾಟೆಯಾಗಿದ್ದುಂಟು. ಆಟ ಸಾಮಾನಿನ ಅಂಗಡಿ, ಮಿಣ-ಮಿಣ ಹೊಳೆಯುವ ಗುಲಾಬಿ ಅಂಗಿ ತೊಟ್ಟು, ಸೆಕೆಯಲ್ಲಿ ಬೆವರಿಳಿಯುತ್ತಿದ್ದರೂ ಲೆಕ್ಕಿಸದೆ, ಕಾಡಿಗೆಯೆಲ್ಲ ಮುಖದ ತುಂಬಾ ಮಾಡಿಕೊಂಡು ಐಸ್-ಕ್ರೀಮ್ ನೆಕ್ಕುತ್ತಿದ್ದ ಮಗು, ಸಾಬೂನಿನ ನೀರಿನ ಗುಳ್ಳೆ, ಮುಂತಾದವುಗಳು ನಮ್ಮ ಹಾದಿ ತಪ್ಪಿಸುವ ಅಂಶಗಳಾಗಿದ್ದವು. ಒಮ್ಮೆ ಹೀಗೆ ಗಮನ ತಪ್ಪಿ, ತಿರುಗಿ ನೋಡಿದಾಗ ಅಮ್ಮ ಉಟ್ಟ ಅದೇ ಸೀರೆಯ ಉಟ್ಟ ಹೆಂಗಸೊಡನೆ ತುಸು ದೂರ ನಡೆದು, ಕಾಣೆಯಾಗಿ ಅತ್ತಿದ್ದು ಉಂಟು. ಐದು ನಿಮಿಷಗಳೊಳಗೆ ಅಮ್ಮ ಸಿಗದಿದ್ದರೆ ಇವತ್ತು ನೀವು ಹೀಗೆ ನಾನು ಬರೆದಿದ್ದು ಓದುತ್ತಿರಲಿಲ್ಲ.

ಚಿಕ್ಕವರಿರುವಾಗ 'ನಗಿಸುವ ಕನ್ನಡಿ', 'Dog ಶೋ', 'ಬಾವಿ ಮೋಟಾರ್ ಸೈಕಲ್' ಹೀಗೆ ಒಂದಲ್ಲ ಇನ್ನೊಂದು ಅಚ್ಚರಿಗಳು ನಮ್ಮ ಮನಸ್ಸು ತುಂಬುತ್ತಿತ್ತು. ಅದೆಲ್ಲ ಕಳೆದು ಏಳನೇ - ಎಂಟನೇ ಕ್ಲಾಸಿನಲ್ಲಿದ್ದಾಗ ಒಮ್ಮೆ ಜಾತ್ರೆ. ಆ ವರ್ಷ ಒಂದು ಹೊಸ ಸಾಹಸ ಮಾಡಿದೆ ನಾನು. ರಾತ್ರಿ ಊಟ ಆದ ಮೇಲೆ ಜಾತ್ರೆಗೆ ಹೋಗುವ ನನ್ನ ಸ್ನೇಹಿತೆಯ ಮನೆಗೆ ಹೋಗಿ ಉಳಿದೆ. ಅವರ ಜೊತೆ ರಾತ್ರಿ ಊಟ ಆದಮೇಲೆ, ಅವಳಪ್ಪ - ಅಮ್ಮ, ಬಂಧುಗಳೆಲ್ಲರ ಜೊತೆ ಸುಮಾರು ಹತ್ತು ಜನ ಗುಂಪು -ಗುಂಪಾಗಿ ನಡೆದೇ ಹೋದೆವು. ಆಹಾ! ರಾತ್ರಿ ಜಾತ್ರೆಗೆ ಹೋಗುವ ಮಜವೇ ಬೇರೆ ಎಂದು ತಿಳಿದಿದ್ದೇ ನನಗಾಗ. ಹಗಲಿನ ಬಿಸಿಲಿನ ಝಳಕ್ಕೆ ಅರ್ಧ ಹಮ್ಮಸ್ಸು ಹೋಗಿ ಬಿಡುತ್ತದೆ. ರಾತ್ರಿ ಜಾತ್ರೆಗೆ ಬರುವವರೆಲ್ಲರೂ ಕೇವಲ ಮಜವನ್ನು ಮಾಡುವ ಏಕೋದ್ದೇಶದಿಂದ ಸತ್ಯನಿಷ್ಠರಾಗಿ ಬಂದಿರುತ್ತಾರೆ. ಆ ಪರಿಸರ ಕಣ್ಣಿಗೊಂದು ಹಬ್ಬ. ಎಲ್ಲೆಲ್ಲೂ ನಗು- ಹಾಸ್ಯ, ಸಂಗೀತ ಮತ್ತು ಬಣ್ಣ - ಬಣ್ಣದ ಉಡುಪುಗಳ ತೊಟ್ಟ ಯುವಕ-ಯುವತಿಯರು. ದಿನವೂ ಶಾಲೆಯಲ್ಲಿ ಕಾಣುವ ಅದೇ ಹುಡುಗರು ಜಾತ್ರೆಯಲ್ಲಿ ಕಂಡರೆ, ಕಂಡು ನಕ್ಕರೆ, ನಕ್ಕು ಮಾತನಾಡಿಸಿದರೆ, ನಮ್ಮ 'ಛದ್ಮವೇಷ(?)'ದ ಬಗ್ಗೆ ಹೊಗಳಿ ಮಾತನಾಡಿದರೆ, ಅದೇ ಖುಷಿ. ಮುಂದಿನ ಜಾತ್ರೆಯವರೆಗೂ ಅದು ಮರೆಯುವುದಿಲ್ಲ. ಕದ್ದು- ಕದ್ದು ನೋಡುವ ನೋಟಗಳು, ಸಾಧ್ಯವಾದಷ್ಟು ಹಿಂಬಾಲಿಸಿ, ಥಟ್ಟನೇ ಮಾಯವಾಗಿ ಹೋಗುವ ರೋಮಿಯೋಗಳು, ಅನಾಮಧೇಯ ಹುಚ್ಚು ಕಲ್ಪನೆಗಳು, ಇವೇ ಜಾತ್ರೆಯ ವಿಶೇಷಗಳು. 

ನಂತರದ ಜಾತ್ರೆಯ ಸಮಯದಲ್ಲೇ ಹತ್ತನೆಯ ತರಗತಿಯ ನಿರ್ಣಾಯಕ ಪರೀಕ್ಷೆ. ಅಕ್ಕಿಯ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ ಎಂಬಂತೆ ಜಾತ್ರೆಯನ್ನು ಪರಿಪೂರ್ಣವಾಗಿ ಆಸ್ವಾದಿಸಲೂ ಆಗದೆ, ಅತ್ತ ಮನಸುಕೊಟ್ಟು ಅಭ್ಯಾಸವೂ ಮಾಡಲಾಗದೆ ಜೀವನ ಬ್ರಹ್ಮಗಂಟೆಂದು ಎನಿಸಿದ್ದು ಸುಳ್ಳಲ್ಲ. ಆ ಸಲದ ಜಾತ್ರೆಯಲ್ಲೋ ಡಬಲ್ ಧಮಾಕ. ಕನ್ನಡ ಚಿತ್ರರಂಗದ ದಿಶೆಯನ್ನೇ ಬದಲಾಯಿಸಿದ 'ಮುಂಗಾರು ಮಳೆ' ಲಕ್ಷ್ಮೀ ಥಿಯೇಟರ್ನಲ್ಲಿ ಓಡಿದರೆ, 'ಮಿಲನ' ನಟರಾಜ ಥಿಯೇಟರ್ನಲ್ಲಿ ಓಡುತ್ತಿತ್ತು. ನಮಗೆ ಪರೀಕ್ಷೆ. ಎಸ್. ಎಲ್. ಭೈರಪ್ಪನವರ 'ಆವರಣ'ವೂ ಆಗತಾನೇ ಬಿಡುಗಡೆಯಾಗಿತ್ತು. ಇವೆಲ್ಲವನ್ನೂ ಸರಿತೂಗಿಸುವುದು ನನ್ನ ಮಟ್ಟಿಗಿನ ದೊಡ್ಡ ಸವಾಲಾಗಿತ್ತು. ಅಂತೂ- ಇಂತೂ, 'ಆವರಣ' ಕಾದಂಬರಿಯನ್ನು ಇಂಗ್ಲೀಷ್ ಪರೀಕ್ಷೆಯ ಹಿಂದಿನ ರಾತ್ರಿ ಓದಿ ಮುಗಿಸಿ, ಮಧ್ಯ ರಜೆ ಇದ್ದಾಗ ಜಾತ್ರೆಗೆ ಹೋಗಿ, ಸಿನಿಮಾಗಳನ್ನು ಜಾತ್ರೆ-ಪರೀಕ್ಷೆ ಮುಗಿದ ಮೇಲೆ ನೋಡಿದ್ದಾಯಿತು. ಜಾತ್ರೆಗೆ ಹೋಗದ ದಿನಗಳಲ್ಲಿ ಅಭ್ಯಾಸದ ನೆಪದಲ್ಲಿ ತಾರಸಿಯ ಹತ್ತಿ, ಅಲ್ಲಿಂದ ಗಡಚಿಕ್ಕುವ ಬಿಡಿಕಿಬೈಲಿನ ಸಂಗೀತ ಕೇಳಿ, ಅಲ್ಲಿ ನಾನಿದ್ದಂತೆ ಕಲ್ಪನೆ ಮಾಡಿಕೊಳ್ಳುತ್ತಾ ಕನಸು ಕಾಣುತ್ತಿದ್ದೆ. 

ಮುಂದಿನ ಸಾರಿ ಜಾತ್ರೆ ಬರುವಾಗ, ನಾನಾಗಲೇ ಅರ್ಧ(0ಬರ್ಧ) ವಕೀಲೆ! ಕಾಲೇಜಿನ ಗೆಳೆಯರಿಗೆಲ್ಲ ನಮ್ಮ ಜಾತ್ರೆಯನ್ನು ವಿವರಿಸಿಕೊಡುವುದೇ ಒಂದು ಸಡಗರವಾಗಿತ್ತು. ಆವಾಗಲೇ ನಾನು ಹಲವಾರು ವರ್ಷಗಳ ನಂತರ ಜಾತ್ರೆಯಲ್ಲಿ ನಡೆಯುವ ಯಕ್ಷಗಾನಕ್ಕೆ ಹೋಗಿದ್ದು. ಅರ್ಧರಾತ್ರಿ ಕಳೆದ ಮೇಲೆ ತೊಡಗಿದ ಸುಸಂಸ್ಕೃತ ದ್ವಂದ್ವಾರ್ಥದ ಸಂಭಾಷಣೆಗಳು ನಮ್ಮನ್ನು ಎಬ್ಬಿಸಿ ಮನೆಗೆ ಕಳುಸಿದವು. ಜಾತ್ರೆಯಲ್ಲಿ ವರ್ಷವಿಡೀ ಎಲ್ಲೆಲ್ಲೂ ಇರುವ ಹಳೆಯ ಗೆಳೆಯರು, ಗೆಳೆತಿಯರು, ಮುಖಾಮುಖಿಯಾಗುತ್ತಾರೆ. ಕೆಲವರು ಮಾತನಾಡುತ್ತಾರೆ, ಅಪ್ಪಿಕೊಳ್ಳುತ್ತಾರೆ. ಕೆಲವರು ಎದುರಿಗಿರುವವರು ಮಾತನಾಡಲು ಉತ್ಸುಕರಾದರೂ ಸುಮ್ಮನೆ ನಕ್ಕು ಬಿರಬಿರನೆ ನಡೆದುಬಿಡುತ್ತಾರೆ. ನೀವು ತುಂಬಾ ದಪ್ಪವೋ- ಸಣ್ಣಗೊ ಆಗಿದ್ದರೆ ಕೆಲ ಕಾಲಗಳ ದಿಟ್ಟಿಸಿ, ಸಂಶಯದಿಂದಲೇ ಹತ್ತಿರ ಬಂದು ಮಾತಾಡಿಸುತ್ತಾರೆ. ಕೆಲವರು ಅದಾಗಲೇ ವೇದನೆಯಲ್ಲಿರುವ ಮನಸಲ್ಲಿ ಉರಿಯುವ ಕೊಳ್ಳಿಯನ್ನು ಸರಾಗವಾಗಿ ಇಳಿಸುವಂತಹ ನಗುವೊಂದನ್ನು ನಕ್ಕು ಹೋಗಿಬಿಡುತ್ತಾರೆ, ಶಾಂತವಾದ ನೆನಪುಗಳ ಕಡಲನ್ನು ಹುಚ್ಚೆಬ್ಬಿಸಿ. ಅದು ಜನರ ಮೇಳ ಮಾತ್ರವಲ್ಲ, ಭಾವ- ಭಾಂಧವ್ಯಗಳ ಮೇಳ. 


ಅದಾದ ಮತ್ತೆ ನಾನೊಂದೇ ಸಾರಿ ಜಾತ್ರೆಗೆ ಹೋಗಿದ್ದು, ಕಾಲೇಜಿನ ನಾಲ್ಕನೇ ವರ್ಷದಲ್ಲಿದ್ದಾಗ. ಹಾರಲು ಕಾಲೆತ್ತರಿಸಿ, ಬೇರುಗಳನ್ನು ಬಿಡಲು ಸಿಧ್ದವಾಗಿದ್ದ ಸಮಯ. ಜಾತ್ರೆಗೆ ಬಂದೆ, ದೇವಿಯ ದರ್ಶನ ಮಾಡಿದೆ. ಸ್ನೇಹಿತರೊಂದಿಗೆ ರಾತ್ರಾ-ಜಾತ್ರಾ- ಪರ್ಯಟನೆಯೂ ಆಯಿತು. ನಾನು ಅದಾಗಲೇ ಹಗಲಿನ ಜಾತ್ರೆಯ ಪಾಲಿಗೆ 'ಪರಿಧಿ ಪ್ರದೇಶ'ದಿಂದ ಹೊರಗಾಗಿದ್ದೆ. ಆದರೂ ಇಷ್ಟೂ ವರ್ಷಗಳ ನಂತರವೂ ಹೊಸದೇನೂ ಮಾಡಲಿಕ್ಕೆ ಬಾಕಿಯಿತ್ತು. ಮೊದಲ ಬಾರಿಗೆ ಜೀವನದಲ್ಲಿ ಜಾತ್ರೆಯ ನಾಟಕಕ್ಕೆ ಹೋದೆ. ಅವರು ನಾಟಕವನ್ನು ಮಾಡುತ್ತಿದ್ದಾರೆ ಎಂಬುದೇ ಒಂದು ನಾಟಕವಾಗಿ ತೋರಿತು ನನಗೆ. ತುಂಬಾ ನಕ್ಕೆ; ಹಾಸ್ಯಕ್ಕಲ್ಲ, ಪರಿಹಾಸ್ಯಕ್ಕೆ. ಅಸಂಬದ್ಧ ಸಂಭಾಷಣೆಗಳೂ, ಅತಿ ಎನಿಸುವ ಅಲಂಕಾರ, ಅರ್ಥವೇ ಇಲ್ಲದ ಕಥೆಗಳು, ನೋಡಿ ಯಾವುದೊ ಲೋಕಕ್ಕೆ ಹೋದಂಗಾಯಿತು. ಆದರೆ, ಜೊತೆಗಿರುವವರು ನಮ್ಮ ಪ್ರೀತಿಪಾತ್ರದಾರೆ ಎಂತಹ ಸನ್ನಿವೇಶದಲ್ಲೂ ನಾವು ಎದೆಗುಂದದೆ ಇರಬಹುದು. ಧೈರ್ಯವಾಗಿ ಆ ನಾಟಕವನ್ನು ಪೂರ್ತಿ ನೋಡುವ ಸಾಹಸ ಮಾಡಿದೆ. ಇನ್ನೊಂದು ನಾಟಕ ನೋಡುವುದಿಲ್ಲವೆಂದು ಶಪಥ ಮಾಡಿದೆ.


ಅದೇ ಕೊನೆಯ ಜಾತ್ರೆ. ಮತ್ತೆ ಜಾತ್ರೆಗೆ ಹೋಗಲೇ ಆಗಲಿಲ್ಲ. ಪ್ರತಿ ಜಾತ್ರೆ ಬಂದಾಗಲೂ ಹೀಗೆಯೇ ಹಳೆಯದನ್ನು ನೆನಪಿಸಿಕೊಳ್ಳುತ್ತಾ, ಅಕ್ಕ - ಪಕ್ಕದಲ್ಲಿದ್ದವರಿಗೆ ಜಾತ್ರೆಯ ಫೋಟೋ- ವೀಡಿಯೊ ತೋರಿಸುತ್ತಾ ಸಮಾಧಾನಪಡುತ್ತೇನೆ. ಆ ಬಾರಿಯೇ ಜಾತ್ರೆಯೂ ಹೀಗೆ ಕಳೆಯಿತು. ಮುಂದಿನ ಬಾರಿಯಾದರೂ ಜಾತ್ರೆಗೆ ಹೋಗುತ್ತೇನೆ.  ಗೋಬಿ ಮಂಚೂರಿಯಿಂದ ಶುರುವಾದ ಬದಲಾದ ಗಾಳಿ ಪಿಜ್ಜಾ - ಬರ್ಗರ್ನ್ನೂ ನಮ್ಮ ಜಾತ್ರೆಗೆ ಕರೆತಂದದ್ದನ್ನು ನೋಡಿ ಅಚ್ಚರಿಪಡುತ್ತೇನೆ. ಬಳೆ ಅಂಗಡಿಗೆ ಹೋಗುತ್ತೇನೆ. ರಾತ್ರಿ ಜಾತ್ರೆ- ಪೇಟೆ ಅಲೆಯುತ್ತೇನೆ. ಅಮ್ಮನಿಗೊಂದಿಷ್ಟು ಬಕೆಟ್ಟು - ಟಬ್ಬು ಖರೀದಿಸಿಕೊಡುತ್ತೇನೆ. ಹಳೆಯ ನೆನಪುಗಳನ್ನು ಹುಡುಕಿ ಹಸ್ತಲಾಘವ ಮಾಡುತ್ತೇನೆ. ದೇವಿಯ ದರ್ಶನ ಮಾಡಿ ಕಣ್ಮನ ತುಂಬಿಕೊಳ್ಳುತ್ತೇನೆ.

-ನಿಷಾದ

Photo credits : Nandan Hegde

Comments

Popular Posts