ಜೀವದ ಗೆಳೆಯನಿಗೆ ಇಲ್ಲೊಂದು ನಿವೇದನೆ..

ಎಲ್ಲಿರುವೆ ಸಖ ನೀನು? ನಿನಗಾಗಿಯೇ ಕಾದಿರುವ ನನ್ನನ್ನು ನೋಡಲೂ ಬಾರದೆ ಸಪ್ತ ಸಾಗರದಾಚೆ ಕಳೆದು ಹೋಗಿರುವೆಯಾ? ಅಗಲಿ ಅದೆಷ್ಟು ವರ್ಷಗಳಾದರೂ ಇಂದಿಗೂ ಮನದ ಬೆಚ್ಚನೆಯ ಪುಟಗಳ ನಡುವೆ ನಾ ಬಚ್ಚಿಟ್ಟುಕೊಂಡಿರುವೆ.. ನೀ ಕೊಟ್ಟ ಸ್ನೇಹದ ನವಿಲುಗರಿಯ.. ಕಣ್ಣ ಮಿಂಚ ಇಂಗಿದಾಗಲೆಲ್ಲಾ, ಕಾಲ್ಗಳ ಬಲ ಉಡುಗಿದಾಗಲೆಲ್ಲ, ಎದೆಯ ಉಸಿರು ಕುಸಿದಾಗಲೆಲ್ಲ, ನಿನ ನೆನಪು ಆದಾಗಲೆಲ್ಲ... ಹಾಗೆಯೇ ಸುಮ್ಮನೆ ಅದನು ಪ್ರೀತಿಯಿಂದ ನೇವರಿಸಿ ಮತ್ತೆ ಅದೇ ಪುಟಗಳ ನಡುವೆ ಬಚ್ಚಿಟ್ಟು ಬಿಡುವೆ.. ಅದನು ಮುಟ್ಟಿ ಮೈ ತಡವಿದಾಗಲೆಲ್ಲ ಮನದ ಆಗಸದಲ್ಲಿ ನೆನಪುಗಳ ಪುಷ್ಪಧಾರೆ... ಮುಖದ ಮೇಲೊಂದು ಸಣ್ಣ ನಗು, ಕಣ್ಣ ಅಂಚಲ್ಲಿ ನೀರ ಹನಿ... ಆ ನೆನಪುಗಳ ನೆನಪು ನೆಪ ಮಾತ್ರ! ಆ ನೆಪದಲ್ಲಿ ನೆನಪುಗಳಲ್ಲಾದರೂ ನಿನ್ನೊಡನೆ ನನ್ನ ನೋಡುವ ತವಕ. ಅದೆಷ್ಟು ಬಣ್ಣಗಳು ಆ ನೆನಪುಗಳಲ್ಲಿ.. ಅದೇ ತಾನೇ ಚಿಗುರಿದ ಮನಸುಗಳ ತಿಳಿ ಹಸಿರು ಬಣ್ಣ, ಬೆಸುಗೆ ಹಾಕಿದಂತಿದ್ದ ಗಾಢ ಹಳದಿಯ ಬಣ್ಣ, ಮನದ ಯಾವುದೊ ಮೂಲೆಯಿಂದ ಅಲ್ಲಲ್ಲಿ ಬಂದು ಮಿಂಚಿ ಮರೆಯಾಗುತ್ತಿದ್ದ ಪ್ರೀತಿಯ ತಿಳಿ ಗುಲಾಬಿ ಬಣ್ಣ, ಎಷ್ಟೊಂದು ಮಧುರ ಇತಿಹಾಸ!
ನಿನ್ನೊಡನೆ ಬರಲು ಎಲ್ಲರ ಕಣ್ಣು ತಪ್ಪಿಸಿ ಗೋಡೆಯ ಹಾರಿದ್ದು, ಜಡಿಮಳೆ ಬಂದ ರಾತ್ರಿಯಲ್ಲಿ ಕೊಡೆಯಿಲ್ಲದೆ ನಿನ್ನೊಡನೆ ನಡೆದು ಬಂದಿದ್ದು, ಮುಳುಗುವ ಸೂರ್ಯನ ಎದುರು ಕುಳಿತು ಕೈಯಲ್ಲಿ ಕೈಯಿಟ್ಟು ಮನದ ಹೂರಣವ ಬಿಚ್ಚಿಟ್ಟಿದ್ದು... ಎಲ್ಲವೂ ನಿನ್ನೆ ನಡೆದಂತಿದೆ... ನಿನ್ನೊಡನೆ ಕಳೆದ ಆ ಮೂರು ವರ್ಷಗಳು ಮೂರು ಜನ್ಮದ ಸ್ನೇಹವನ್ನು ಕರೆದು ಧಾರೆಯೆರೆದುಕೊಟ್ಟವು! ಅದೇ ನೆನಪುಗಳಿಂದ ಇಂದಿಗೂ ಉಸಿರಾಡುತಿರುವೆ, ಆದರೆ ನೀನು ನನ್ನ ಪಾಲಿಗೆ ಬರೀ ನೆನಪಾಗಿದ್ದು ವಿಪರ್ಯಾಸ! ನಾವಿಬ್ಬರು ಬಯಸಿ- ಬಯಸಿ ಕಂಡುಕೊಂಡಿದ್ದ ಬದುಕನ್ನು ವಿಧಿ ದಯೆಯಿಲ್ಲದೆ ಒಡೆದು ಹಾಕಿತು.. ಇನ್ನೆಂದಿಗೂ ಬಾರದ ಲೋಕಕ್ಕೆ ನಿನ್ನನ್ನು ಕಳಿಸಿತು.. ಜಗತ್ತೇ ನೀನಾಗಿದ್ದ ನನಗೆ ಬದುಕು ಯಂತ್ರವಾಯಿತು!
ಓಡುವ ಜಗದಲ್ಲಿ ಅಳುವೂ ನಿಂತು ಹೋಯಿತು, ಈಗ ಅನಿಸುತ್ತಿದೆ.. ಬಹುಶಃ ನೀ ಹೋದ ಜಗದಲಿ ಪ್ರೀತಿಸುವ ಜೀವ ಕೊರತೆಯಿತ್ತೇನೋ..ಅದಕೇ ವಿಧಿ ಅಷ್ಟು ಅವಸರದಲ್ಲಿ ನಿನ್ನನು ಕರೆಸಿತ್ತು.. ಇಂದಿಗೂ ನಾ ನಡೆಯುತಿರುವೆ, ನಿನ್ನ ನೆನಪುಗಳೊಂದಿಗೆ, ನಿನ್ನ ಸ್ಫೂರ್ತಿ ಬಲದೊಂದಿಗೆ, ಸಿಕ್ಕ ಪ್ರತಿ ಮುಖದಲ್ಲಿ ನಿನ್ನ ಹುಡುಕುತ್ತಾ... ಕಂಡ ಪ್ರತಿ ಅಕ್ಷರದಲ್ಲಿ ನಿನ್ನನರಸುತ್ತಾ...

ನಿನ್ನಿಂದ ಎಂದೂ ಬಾಡದ ಒಲುಮೆ- ಸ್ನೇಹಗಳ
ಹೂಗುಚ್ಚವ ಪಡೆದ
ನಿಷಾದ

Comments

  1. e raashi chand baradde han..........tooooooooo cute writting....caaryy on...

    ReplyDelete
  2. serious aagi love maadirovru kooda ee level ge feeling bariyolla... ontara baribeku anta feeling huttisiro haagide..

    ReplyDelete
  3. ಮನದೊಳಗಿನ ಭಾವಕೆ
    ಪದಗಳ ಪೋಣಿಸಿ .....
    ಬರಹದಲೊಂದು
    ಆತ್ಮೀಯತೆಯ ಜಿನುಗುಸಿ ....
    ಬರೆದಿರುವಿರಿ
    ಅನುಭವಿಸಿ .......





    ಬಿಡಬೇಡಿ ಇದನು
    ಹೀಗೆ ಮುಂದುವರೆಸಿ !!!!

    ReplyDelete
  4. ಗಾಢ ಪ್ರೀತಿಯ
    ಮಧುರ ಯಾತನೆ,
    ಮನದಲ್ಲಿ ಅಚ್ಚೊತ್ತಿ ನಿಲ್ಲುವಂತೆ
    ಬರಹ ಮೂಡಿಬಂದಿದೆ.
    ಬರೀತಿರು...
    ಬರಹ ಇಷ್ಟವಾಯ್ತು..

    ReplyDelete
  5. ಧನ್ಯವಾದಗಳು...

    ReplyDelete

Post a Comment

Popular Posts