ಸಾವಿನ ಹೊಣೆ



ಸುಂದರವಾದ ನಗುಮುಖದೊಂದಿಗೆ ಮನಸು ಕದ್ದ, ಪ್ರೌಢ ಅಭಿನಯದೊಂದಿಗೆ ಗೌರವ ಗಳಿಸಿದ, ಭಾವುಕ, ಹಮ್ಮು - ಬಿಮ್ಮು ಇಲ್ಲದ, ತಾರಾ ವರ್ಚಸ್ಸು ತಲೆಗೇರದ ತಾರೆಯಾಗಿದ್ದರು ಸುಶಾಂತ್ ಸಿಂಗ್ ರಜಪೂತ್ ರವರು ಎಂದು ಈಗ ಎಲ್ಲರೂ ಹಾಡಿ ಹೊಗಳುವವರೇ. 
ಈ ಘಟನೆಯ ಬಗ್ಗೆ ಓದಿದಾಗಿನಿಂದ ಒಂದೇ ಸಮನೆ ಸಂಕಟ ಮನಸಿನಲ್ಲಿ. 
ಕೆಲಸವಿತ್ತು, ಏನೇನೋ ಓದಿದೆ, ಒಂದು ಆನ್ಲೈನ್ ಮದುವೆಯಲ್ಲೂ ಭಾಗವಹಿಸಿದೆ. ಆದರೂ ಕೊರೆಯುತ್ತಿರುವ ಈ ವಿಚಾರದಿಂದ ಹೊರ ಬರಲು ಆಗಲೇ ಇಲ್ಲ. ಅದಕ್ಕೆ ಮನಸು ಹಗುರಾಗಿಸಿಕೊಳ್ಳಲು ಇಲ್ಲಿ  ಬರೆಯುತ್ತಿದ್ದೇನೆ. 
ಒಬ್ಬ ವ್ಯಕ್ತಿ ತೀರಿಕೊಂಡ ಅಂದರೆ, ಯಾವ ರೀತಿ ತೀರಿಕೊಂಡ ಎನ್ನುವುದೂ ನಮ್ಮ ದುಃಖದ ಪ್ರಮಾಣವನ್ನು ನಿರ್ಧರಿಸುವ ಅಂಶಗಳಲ್ಲೊಂದು ಎಂದರೆ ತಪ್ಪಾಗಲಾರದೇನೋ. ಸಹಜ ಸಾವು, ಅಪಘಾತ, ರೋಗಭಾದೆ ಇವೆಲ್ಲಕ್ಕಿಂತಲೂ ಭೀಕರ ಆತ್ಮಹತ್ಯೆ. ಬಾಕಿಯದೆಲ್ಲ ವಿಧಿ ಬರಹವೆಂದೋ, ಅನಿವಾರ್ಯವೆಂದೋ ಮನಸ್ಸನ್ನು ಸಮಾಧಾನಗೊಳಿಸಿಕೊಳ್ಳಬಹುದು. ಆತ್ಮಹತ್ಯೆ ಹಾಗಲ್ಲವಲ್ಲ? ನಮ್ಮ ಕೈಯಾರೆ ನಾವು ಈ ಜೀವನ ಬೇಡವೆಂದು ನಮ್ಮನ್ನು ನಾವೇ ಕೊಂದುಕೊಳ್ಳಬೇಕಾದರೆ ಅದೆಷ್ಟು ನೋವು ಮಡುಗಟ್ಟಿರಬೇಕು ಮನಸಲ್ಲಿ? ಎಷ್ಟು ಸಂಕಟವಾಗಿರಬೇಕು? ನೆನೆಸಿಕೊಂಡರೆ ಮೈ ಝುಮ್ಮೆನ್ನುತ್ತದೆ. 
ಯಾಕೆ ಆತ್ಮಹತ್ಯೆ? ಅದು ಪರಿಹಾರವಲ್ಲ ಎಂದು ಹೇಳುವುದು ಸುಲಭ. ಎಲ್ಲರೂ ಅದನ್ನೇ ಹೇಳುವುದು. ಆದರೆ ಅದಕ್ಕೂ ಮೀರಿ, ನಾವು ಯೋಚನೆ ಮಾಡಬೇಕಾದ ಅವಶ್ಯಕತೆಯಿದೆಯೆಂಬುದು ನನ್ನ ಅಭಿಪ್ರಾಯ. ನಿಜವಾಗಿಯೂ ಈ ಆತ್ಮಹತ್ಯೆಗಳು ಒಬ್ಬ ಮನುಷ್ಯನ ವೈಯಕ್ತಿಕವಾದ ಮಾನಸಿಕ ದೌರ್ಬಲ್ಯದ ಸಂಕೇತ ಮಾತ್ರವೇ? ಆಳವಾಗಿ ಚಿಂತಿಸಿದರೆ ಬಹುತೇಕ ಆತ್ಮಹತ್ಯೆಗಳು ಬೇರೆಯದೇ ಕಥೆ ಹೇಳುತ್ತವೆ. 
ಈಗ ಸುಶಾಂತ್ ಅವರ ಆತ್ಮಹತ್ಯೆಯನ್ನೇ ತೆಗೆದುಕೊಳ್ಳಿ. ಅಂತಹ ಒಬ್ಬ ಹಟಗಾರ ಖಿನ್ನತೆಗೆ ಸರಿದಿದ್ದೇಕಿರಬಹುದು? ಸರಿ, ಖಿನ್ನತೆಗೆ ಹೇಗೆ ಬೇಕಾದರೂ ಬರಬಹುದು, ಆದರೆ ಒಬ್ಬ ವ್ಯಕ್ತಿ ಸಹಿಸುವುದಕ್ಕೂ ಮಿತಿಯಿದೆಯಲ್ಲವೇ? ಸ್ವಜನ ಪಕ್ಷಪಾತದಿಂದ ಕೊಳೆಯಿತ್ತಿರುವ ಹಿಂದಿ ಚಿತ್ರರಂಗದಲ್ಲಿ ಸತತವಾಗಿ ಅವಮಾನ, ಒಂಟಿತನ ಹಾಗೂ ನಿರಾಕರಣೆಯನ್ನು ಅನುಭವಿಸಿದ್ದು ಅವರ ಖಿನ್ನತೆಗೆ ಕೊಡುಗೆ ನೀಡಿಲ್ಲವೆಂದು ಖಂಡಿತವಾಗಿ ಹೇಳಲಿಕ್ಕೆ ಬರುತ್ತದೆಯೇ? 
ಕೇರಳದಲ್ಲಿ ಕೆಲವೇ ದಿನಗಳ ಹಿಂದೆಯಷ್ಟೇ ಹತ್ತನೇ ತರಗತಿಯಲ್ಲಿ ಓದುತ್ತಿದ್ದ ಆದಿವಾಸಿ ಜನಾಂಗದ ಪ್ರತಿಭಾವಂತ ಹುಡುಗಿಯೊಬ್ಬಳು, ಆನ್ ಲೈನ್ ತರಗತಿಯಲ್ಲಿ ಭಾಗವಹಿಸಲು ಸಾಧ್ಯವಾಗದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಳು. ಆ ಚಿಕ್ಕ ಹುಡುಗಿಯ ಜೀವ ಕೊನೆಯಾದ್ದರಲ್ಲಿ, ಆಕೆಯ ಕುಟುಂಬದ ಬಡತನ ಮತ್ತು ಆಕೆಯ ಕುಟುಂಬವನ್ನು ಬಡತನದಿಂದ ಮೇಲೆತ್ತಲಾಗದ ವ್ಯವಸ್ಥೆಯ ಪಾಲು ಇಲ್ಲವೇ? 
ಆದರೆ ಈ ಸಮಸ್ಯೆಗಳ ಕುರಿತು ದೊಡ್ಡದಾಗಿ ಯಾರೂ ಮಾತನಾಡುವುದಿಲ್ಲ. ಯಾವುದಾದರೊಂದು ಸಂಚಲನ ಹುಟ್ಟಿಸುವ ಆತ್ಮಹತ್ಯೆಯಾದ ಕೊಡಲೇ ನಾವು ಮಾನಸಿಕ ಆರೋಗ್ಯ, ಧ್ಯಾನ, ಹಿತೈಷಿಗಳೊಂದಿಗೆ ದುಃಖ ಹಂಚಿಕೊಳ್ಳುವುದರ ಪ್ರಾಧಾನ್ಯತೆ ಇವುಗಳ ಬಗ್ಗೆಯೇ ಮಾತನಾಡುತ್ತೇವೆ. ಇವುಗಳ ಬಗ್ಗೆ ಮಾತನಾಡುವುದು ತಪ್ಪೆಂದಲ್ಲ. ಆದರೆ ಮೂಲಭಾತವಾದ ವ್ಯವಸ್ಥಿಕವಾದ ಕಾರಣಗಳನ್ನು ಹುಡುಕದಿದ್ದರೆ, ಅವುಗಳನ್ನು ಎತ್ತಿ ತೋರಿಸದಿದ್ದರೆ, ಅವುಗಳ ಬಗ್ಗೆ ಚರ್ಚಿಸದಿದ್ದರೆ, ನಾವು ಇಡೀ ಚರ್ಚೆಯನ್ನೇ ದಾರಿ ತಪ್ಪಿಸಿದಂತಾಗುತ್ತದೆ. 
ವ್ಯವಸ್ಥೆ ಮಾಡುತ್ತಿರುವ ಕೊಲೆಗಳಿಗೆ ಆತ್ಮಹತ್ಯೆ ಎಂಬ ಹಣೆಪಟ್ಟಿ ಕೊಟ್ಟು, ಸತ್ತವರ ದೇಹದ ಜೊತೆಗೆ, ಅವರ ಸಾವುಗಳಿಗೆ ಕಾರಣವಾದ ಸಮಸ್ಯೆಗಳ ಪರಿಹಾರವನ್ನೂ ಸುಟ್ಟು ಬಿಡುತ್ತೇವೆ ಅಥವಾ ಮಣ್ಣು ಮಾಡುತ್ತೇವೆ. ಆ ರಕ್ಕಸ ಸಮಸ್ಯೆಗಳು ಅಪ್ರತ್ಯಕ್ಷವಾಗಿ ಕೈಗೆ ಸಿಕ್ಕಿದವರನ್ನು ಹಿಂಸಿಸುತ್ತಲೇ ಇರುತ್ತವೆ ಮತ್ತು ಜೀವಗಳನ್ನು ಬಳಿ ತೆಗೆದುಕೊಳ್ಳುತ್ತಲೇ ಇರುತ್ತವೆ. ಬಿಸಾಡಿದರೂ ಚೂರಾಗದ ಒಂದೋ, ಎರಡೂ ಗಟ್ಟಿ ಜೀವಗಳು ಉಳಿದುಕೊಳ್ಳುತ್ತವೆ. ಬಾಕಿ ಎಷ್ಟೋ ಪ್ರತಿಭಾವಂತ, ನಿಷ್ಠ ಮತ್ತು ಸಾಧು ಜೀವಗಳು ಅಳಿದು ಹೋಗುತ್ತವೆ. ಅಂತಹ ಜೀವಗಳು ನಶಿಸಿಹೋಗುವುದು ಅವರ ಬಲಹೀನತೆಯೊಂದಲ್ಲ, ಬದಲಾಗಿ ವ್ಯವಸ್ಥೆಯ ಕರಾಳ ಹಿಡಿತದಿಂದಾಗಿ. 
ನಾನು ಚಿಂತಿಸಿದಷ್ಟೂ ನಾನು ನೋಡಿದ, ಓದಿದ ಆತ್ಮಹತ್ಯೆಗಳೆಲ್ಲವೂ ಈ ವಿಭಾಗದಲ್ಲಿ ಒಳಪಟ್ಟಿರುವವೇ ಆಗಿವೆ. ದುರಂತವಾದ ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಎಷ್ಟು ನಟ - ನಟಿಯರು ನಮಗೆ ತಿಳಿದಿಲ್ಲ? ಸಮಾಜದ ಕಿರುಕುಳ ತಾಳಲಾರದೆ ಅದೆಷ್ಟು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ? ವರದಕ್ಷಿಣೆಯ ನೆಪದಲ್ಲಿ ಅದೆಷ್ಟು ಹೆಣ್ಣುಮಕ್ಕಳು ಜೀವ ತೆತ್ತಿದ್ದಾರೆ? ಪರೀಕ್ಷೆ ಫೇಲಾದ, ಕಾಲೇಜಿನ ಆಡಳಿತದ ಕಾಟ ತಾಳಲಾರದೆ ಎಷ್ಟು ವಿದ್ಯಾರ್ಥಿಗಳು ಜೀವನವನ್ನು ಕೊನೆಗೊಂಡಿಸಿಕೊಂಡಿಲ್ಲ? ಒಂದೊಂದು ಆತ್ಮಹತ್ಯೆಯ ಹಿಂದೆಯೂ ವ್ಯವಸ್ಥೆಯ, ಸಮಾಜದ ಒಂದೊಂದು ಭಯಂಕರ ಮುಖವಿದೆ. ಈಗ ನಾನು ಹೇಳಿದ ಎಲ್ಲ ಉದಾಹರಣೆಗಳೂ ವ್ಯವಸ್ಥೆಯ ಕೂಸುಗಳೇ. ಅವುಗಳ ಬಗ್ಗೆ ಮಾತನಾಡುವುದು ಬಿಟ್ಟು ಕೇವಲ ಮಾನಸಿಕ ಆರೋಗ್ಯದ ಬಗ್ಗೆ ಮಾತ್ರ ಕುರಿತು ಮಾತನಾಡಿದರೆ ಈ ಸಾವುಗಳಿಗೆ ಎಂದಾದರೂ ಕೊನೆಯಿದೆಯೇ? 
ವ್ಯವ್ಯಸ್ಥೆಯನ್ನು ಕೇವಲ ದೂರುವುದರಿಂದ ಸಮಸ್ಯೆಗೆ ಪರಿಹಾರ ಸಿಗುವುದೇ ಎಂದು ನಿಮ್ಮಲ್ಲಿ ಕೆಲವರು ಕೇಳಬಹುದು. ಖಂಡಿತಾ ಇಲ್ಲ. ಆದರೆ ವ್ಯವ್ಯಸ್ಥೆಯನ್ನು ಈ ಸಾವುಗಳಿಗೆ ಹೊಣೆ ಮಾಡುವುದೇ ವ್ಯವಸ್ಥೆಯನ್ನು ಬದಲಾಯಿಸುವ ಮೊದಲ ಹಂತ ಎಂದು ನಾವು ಮರೆಯಬಾರದು. 
ಈಗ ನಾನು ಬರೆದುರುವ ಕುರಿತು ಆಲೋಚಿಸಿ, ನೀವು ಕಂಡ ಆತ್ಮಹತ್ಯೆಗಳ ನಿಜವಾದ ವ್ಯಾವಸ್ಥಿಕ ಕಾರಣಗಳನ್ನು ಹುಡುಕಿ. ಅದನ್ನು ಬದಲಾಯಿಸಲು ನೀವೇನು ಮಾಡಬಹುದೆಂದು ಆಲೋಚಿಸಿ. ಏನಾದರೂ ಹೊಳೆದರೆ, ಇಲ್ಲಿ ಹಂಚಿಕೊಳ್ಳಬೇಕೆನ್ನಿಸಿದರೆ ಇಲ್ಲಿ ಬರೆಯಿರಿ. 

-ನಿಷಾದ


ಫೋಟೋ ಕೃಪೆ :  ಮೆಲಿಂಡಾ ಬೆಕ್ರವರ ಒಂದು ರಚನೆ 

#SushantSinghRajput #Suicide #RealProblem




Comments

Popular Posts