ದೊಡ್ಡವರೆಲ್ಲ ಜಾಣರಲ್ಲ....!!


"ಕಾಲ ಕೆಟ್ಟು ಹೋಗಿದೆ, ಯುವಜನತೆ ಅಧಃಪತನವನ್ನು ಮುಟ್ಟಿದೆ..." ಇವು ಸಂಸ್ಕೃತಿ- ಸಂಸ್ಕಾರ ಕುರಿತ ಭಾಷಣಗಳಲ್ಲಿ ನಾವು ಕೇಳುವ ಸರ್ವೇ ಸಾಮಾನ್ಯವಾದ ಶಬ್ಧಗಳು. ಎಷ್ಟೋ ಸಾರಿ ಸ್ವತಃ ಯುವಕ ಯುವತಿಯರೇ ಚಪ್ಪಾಳೆ ಗಿಟ್ಟಿಸಿಕೊಳ್ಳಲು ಇದಕ್ಕೆ ಇನ್ನೂ ಒಂದೆರಡು ಮಾತುಗಳನ್ನು ಸೇರಿಸಿ ಹೇಳಿದ ಉದಾಹರಣೆಗಳೂ ಉಂಟು. ನಿಜಕ್ಕೂ ಗೆಳೆಯರೇ, ನಾವಷ್ಟು ಕೆಳಕ್ಕಿಳಿದಿದ್ದೇವೆಯಾ? ನಮ್ಮ ನಂಬಿದ ದೇಶಕ್ಕೆ ನಮ್ಮಿಂದ ನ್ಯಾಯವಿಲ್ಲವೇ? ಹಿಂದೆಲ್ಲ ಆಗಿ ಹೋದ ವ್ಯವಸ್ಥೆಗಳಿಗಿಂತ ಉತ್ತಮ ಜೀವನವನ್ನು ನಮ್ಮ ಕೈಯಲ್ಲಿ ಬದುಕಲು ಸಾಧ್ಯವಿಲ್ಲವೇ? ಯೋಚಿಸಿ.

ಸ್ವಾಮಿ ವಿವೇಕಾನಂದರು ಇಡೀ ದೇಶವನ್ನು ಕಟ್ಟಲು ಬಲಿಷ್ಠರಾದ, ದೇಶಭಕ್ತಿ ಉಳ್ಳ ಹತ್ತು ಯವಕರನ್ನು ಕೇಳಿದರು. ನೂರೆಂಟು ಕೋಟಿ ಜನರಿರುವ ಅರ್ಧದಷ್ಟು ಯುವಶಕ್ತಿಯಲ್ಲಿ ಅಂತಹ ಯುವಕ-ಯುವತಿಯರು ಕೇವಲ ಒಂದು ಸಾವಿರದಷ್ಟೂ ಇಲ್ಲವೇ? ದೇಶವೇನು ಜಗತ್ತನ್ನೇ ಪುನರ್ನಿಮಿಸುವ ಕಸುವು ನಮ್ಮಲ್ಲಿದೆ! ಕಾಲ ಕೆಟ್ಟು ಹೋಗಿಲ್ಲ, ಬದಲಾಗಿದೆ ಅಷ್ಟೇ! ಯಾವ ಸಮಾಜವೂ ಶಾಶ್ವತವಾಗಿ ಅತ್ಯುನ್ನತವಾಗಿಯೇ ಇರಲು ಯಾವ ಕಾಲಕ್ಕೂ ಅಸಾಧ್ಯ.. ಪ್ರಾಕೃತಿಕ ವಿಕೋಪಗಳು, ವಿದೇಶೀ ಆಕ್ರಮಣಗಳು, ಕೆಲವು ಕುತಂತ್ರ, ಸ್ವಾರ್ಥಗಳು ಸಮಾಜದಲ್ಲಿ ಏರು-ಪೇರುಗಳನ್ನು ಸೃಷ್ಟಿ ಮಾಡುತ್ತಲಿರುತ್ತವೆಯಷ್ಟೇ? ಎರಡು ಜನಾಂಗ, ಸಂಸ್ಕೃತಿಯ ಜನರು ಬೆರೆತಾಗ 'ಕೊಡು- ಕೊಳ್ಳುವಿಕೆ'ಯು ನಡೆದು ಆಚಾರ-ವಿಚಾರಗಳು ಬದಲಾಗುವುದು ಸಹಜ. ಋಗ್ವೇದ ಕಾಲದ ಪಾವಿತ್ರ್ಯ, ಔನ್ನತ್ಯ, ಆಧ್ಯಾತ್ಮ, ಜ್ಞಾನದ ಹರಿವು ಮೊದಲಾದವುಗಳೆಲ್ಲ ಉತ್ತರವೇದದ ಕಾಲದಲ್ಲಿತ್ತೆ? ಇಲ್ಲ. ಆದರೂ ಸಹಸ್ರ ಸಹಸ್ರ ವರ್ಷಗಳಿಂದ ಬದುಕಿ ಗಟ್ಟಿಯಾಗಿ ಬೇರೂರಿರುವ ಭಾರತೀಯ ಸಂಸ್ಕೃತಿ ಇನ್ನೂ ಉಳಿದಿದೆ ಅಂತಾದರೆ ಅದು ನಮ್ಮ ಸಂಸ್ಕೃತಿಯ ಗಟ್ಟಿತನವನ್ನು ತೋರಿಸುತ್ತದೆ. ನಿರಂತರ ಲೂಟಿಗೊಳಗಾದ ನಮ್ಮ ದೇಶದ ಸಂಪತ್ತು ಇನ್ನೂ ಅಪರಿಮಿತವೇ. ಅಂತಹ ಸಂಸ್ಕೃತಿ- ಸಂಪತ್ತು ಒಂದು ತಲೆಮಾರಿನ ಜನರಿಂದ ನಾಶವಾಗಲು ಅಸಾಧ್ಯ!

'ಆನೋ ಭಾಧ್ರಃ ಕೃತವೋ ಯಂತು ವಿಶ್ವತಃ' ಋಗ್ವೇದದ ಸೂಕ್ತಿಯ ಅರ್ಥ ಜಗತ್ತಿನ ಎಲ್ಲ ಕಡೆಗಳಿಂದ ಒಳ್ಳೆ ವಿಷಯಗಳು ನಮ್ಮೆಡೆಗೆ ಬರಲಿ ಎಂದು. ಇಂದಿನ ಯುವಜನತೆ ವಿದೇಶೀಯರ ಸಮಯಪಾಲನೆಯನ್ನೋ, ಶ್ರಮಜೀವಿತ್ವವನ್ನೋ ಕಲಿತುಕೊಂಡರೆ ತಪ್ಪಿಲ್ಲ.. ನಮಗೆ ಸದ್ಯದ ಪರಿಸ್ಥಿತಿಯಲ್ಲಿ ವೇದ ಕಾಲಗಳಿಗಂತೂ ಹೋಗಲು ಸಾಧ್ಯವಿಲ್ಲ. ಇಂದಿನ ಕಾಲಕ್ಕೆ ತಕ್ಕಂತೆ ನಮ್ಮ ಸಂಸ್ಕೃತಿಯನ್ನು ಅಳವಡಿಸಿಕೊಳ್ಳೋಣ. ಕೂದಲು ನೆರೆತ, ಕೂದಲೇ ಇಲ್ಲದ ಈಗಲೋ-ಆಗಲೋ ಎನ್ನುವವರ ಕೈಯಲ್ಲಿ ದೇಶ ಕೊಟ್ಟು ಪ್ರಯೋಗಗಳನ್ನು ಮಾಡುತ್ತಾ ಕುಳಿತಿರಲು ನಮಗೆ ಸಮಯವಿಲ್ಲ. ಓಡುತ್ತಿರುವ ಜಗತ್ತಿನ ವೇಗಕ್ಕೆ ಬಿಸಿರಕ್ತದ, ತಂಪು ಬುಧ್ಧಿಯ, ಸೂಕ್ಷ್ಮಗ್ರಾಹಿಯಾದ ಗಟ್ಟಿ ಜೀವವೇ ಬೇಕು. ದೇಶ ಕಾಯಲು ಗಡಿಯಲ್ಲಿ ಕೋಲು ಹಿಡಿದ ಸೈನಿಕರನ್ನು ನಿಲ್ಲಿಸಲು ಸಾಧ್ಯವಿಲ್ಲ. ವ್ಯಾಪಾರೀ ಪ್ರಧಾನವಾದ ಜಾಗತಿಕ ಪರಿಸರದಲ್ಲಿ ವಿದೇಶೀ ರಾಯಭಾರಿಗಳ ಜೊತೆಗೆ ನಮ್ಮ 'ಹೆಬ್ಬೆಟ್ಟಿನ' ಅಜ್ಜನ ಮಾತುಗಳು ಗಾಳಿಯಲ್ಲಿ ಲೀನವಾಗಬಹುದು. ದಿನಕ್ಕೊಂದು ಹೊಸ ಆವಿಷ್ಕಾರವಾಗುವಂತಹ ತಂತ್ರಜ್ಞಾನಯುಗದಲ್ಲಿ ನಾವೀನ್ಯತೆಗೆ, ಕ್ರಿಯಾಶೀಲತೆಗೆ ಮೊದಲ ಮಣೆ. ಹೀಗೆ ಪ್ರತಿ ಕ್ಷೇತ್ರದಲ್ಲಿ ಚಿಗುರು ಮನಸುಗಳಿಗೆ ಬೇಡಿಕೆ. ದೇಶ ಯುವಜನತೆಯ ಮೇಲೆ ಇಷ್ಟೊಂದು ಅವಲಂಬಿತವಾಗಿರುವಾಗ ಅವರನ್ನು ಕೇವಲ ಜರಿಯುವುದು ಎಷ್ಟು ಸರಿ?

ಹಾಗಂತ ಸ್ನೇಹಿತರೆ, ಯುವಜನತೆಯಲ್ಲಿ ಋಣಾತ್ಮಕ ಅಂಶಗಳು ಇಲ್ಲವೇ ಇಲ್ಲ ಎಂದಲ್ಲ.ಅಪರಾಧಿಗಳ ಸಂಖ್ಯೆಯಲ್ಲಿ ಯುವಕರದೆ ಮೇಲುಗೈ, ನಕ್ಷಲಿಸಮ್, ಭಯೋತ್ಪಾದನೆಯಲ್ಲೂ ಯುವಕರದೇ ಕೈವಾಡ, ಎಲ್ಲವೂ ಸರಿಯೇ. ಆದರೆ ಅದಕ್ಕೊಂದು ಕಾರಣವಿರಬೇಕಲ್ಲವೇ? ಬದುಕಿನ ಓಟಕ್ಕೆ ಇಂಧನ ಬೇಕು, ಈ ಇಂಧನವು ಶಿಕ್ಷಣ ಮತ್ತು ಅವುಭವವೇ ಹೊರತು ಮತ್ತೇನಲ್ಲ.. ಶಿಕ್ಷಣ ಮತ್ತು ಅನುಭವವು ನಮಗೆ ದೊರಕುವುದು ಹಿರಿಯರಿಂದಲೇ ತಾನೇ? ಹಾಗಾಗಿ ನಾವು ತಪ್ಪು ಹಾದಿ ಹಿಡಿದರೆ, ಗುರಿ ಮುಟ್ಟದೆ ಇದ್ದಾರೆ ಅದು ಇಂಧನದ ತಪ್ಪಲ್ಲವೇ? ಇಂದು ಯುವಜನತೆಯ ಮೇಲೆ ಏನಾದರೂ ಆರೋಪಗಳಿದ್ದರೆ ಅಥವಾ ಸಾಧನೆಗೈದರೆ ಅದರಲ್ಲಿ ಹಿರಿಯರ ಪಾತ್ರವೇ ಬಹುಮುಖ್ಯ.. ಇಂದಿನ ಯುವಜನತೆ ಎಲ್ಲವನ್ನು ಪ್ರಶ್ನಿಸುತ್ತದೆ, ಪರೀಕ್ಷಿಸುತ್ತದೆ. ಸೈಧ್ಧಾಂತಿಕ ಭಿನ್ನಾಭಿಪ್ರಾಯಗಳು ಸಮಾಜವನ್ನು ಒಡೆಯಲಾರವು.. ಹಲವು ಬಾರಿ ಚರ್ಚೆಯ ಮೂಲಕ ಒಳ್ಳೆಯದನ್ನೇ ಮಾಡುತ್ತದೆ. ಕೇವಲ ಪೂರ್ವಾಗ್ರಹ ಮಾತ್ರವಿರುವವರಿಗೆ ಇವುಗಳು ಕಣ್ಣಿಗೆ ಕಾಣಲಾರವು. ಇದೆಲ್ಲದರ ನಡುವೆ ನಮಗೆ software ನಿಂದ, ಯೋಗದವರೆಗೆ ಸಾಧನೆಗೈದಿರುವವರು ಏಕೆ ಕಣ್ಣಿಗೆ ಕಾಣುವುದಿಲ್ಲ? ಕಲ್ಪನಾ ಚಾವ್ಲಾ, ಸುನೀತಾ ವಿಲಿಯಮ್ಸ್ ಗಗನ ಚುಂಬಿಸಿ ಬರಲಿಲ್ಲವೇ? ಅಭಿನವ್ ಬಿಂದ್ರಾ, ಸುಶೀಲ್ ಕುಮಾರ್, ಸೈನಾ ನೆಹ್ವಾಲ್, ಸಾನಿಯಾ ಮಿರ್ಜಾ ದೇಶದ ಕೀರ್ತಿಯನ್ನು ಜಗತ್ತಿಗೆ ಸಾರಿ ಹೇಳಲಿಲ್ಲವೇ? ಈ ಬಾರಿಯ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನಾದ ಮಳೆಯನ್ನೇ ಸುರಿಸಲಿಲ್ಲವೇ ನಮ್ಮ ಯುವಕರು.. ಸಂಗೀತ- ಸಾಹಿತ್ಯ ಕ್ಷೇತ್ರದಲ್ಲೂ ಯುವಕರು ಹಿಂದೆ ಬಿದ್ದಿಲ್ಲ,, ಸೋನು ನಿಗಮ್, ಶ್ರೇಯಾ ಘೋಶಾಲ್, ಎಂ. ಡಿ. ಪಲ್ಲವಿ, ರಾಜೇಶ್ ಕೃಷ್ಣನ್ ಸಿನಿ ರಂಗವನ್ನು ಆಳುತ್ತಿದ್ದರೆ ಉಸ್ತಾದ್ ಫಯಾಜ್ ಖಾನ್, ಸಂಗೀತ ಕಟ್ಟಿ ಮೊದಲಾದವರು ಶಾಸ್ತ್ರೀಯ ಸಂಗೀತ ಲೋಕದಲ್ಲಿ ಬೆಳಗುತ್ತಿದ್ದಾರೆ.. ಪ್ರಖ್ಯ್ಯಾತ ಯುವ ಲೇಖಕ ಚೇತನ್ ಭಗತ್ ಯುವಕರನ್ನಷ್ಟೇ ಅಲ್ಲ, ಹಿರಿಯರನ್ನೂ ಸೆರೆ ಹಿಡಿದ್ದಾರೆ..ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಲೋಕ ಯುವುಕರ ಕೊಡುಗೆಗಳಿಂದ ಶ್ರೀಮಂತವಾಗುತ್ತಿದೆ. ಹಾಗಾಗಿಯೇ ನಮ್ಮ ಹೆಮ್ಮೆಯ ಮಾಜಿ ರಾಷ್ಟ್ರಪತಿಗಳಾದ ಪ್ರೊ. ಅಬ್ದುಲ್ ಕಲಾಂರವರು ದೇಶ ಕಟ್ಟಲು ಯುವಕರಿಗೆ ಕರೆ ನೀಡಿದರು..

ಸಂಸ್ಕೃತಿ ಎನ್ನುವುದು ಇಂಗ್ಲಿಷ್ ಮಾತನಾಡಿದ ಮಾತ್ರಕ್ಕೆ, ದೇವಸ್ಥಾನಗಳಿಗೆ ಹೋಗದ ಮಾತ್ರಕ್ಕೆ ನಾಶವಾಗದು. ದಿನಕ್ಕೆ ಸಾವಿರ ಸಾವಿರ ಲಂಚ ಎಣಿಸಿ, ಭಿಕ್ಷುಕರಿಗೆ ಒಂದು ತುತ್ತೂ ಅನ್ನ ನೀಡದೆ, ವಿಭೂತಿ ಬಳಿದರೇನು ಬಂತು? ಗಂಧ ಹಚ್ಹ್ಚಿದರೇನು ಬಂತು? ಸಾಯುವವನ ಬಾಯಿಗೆ ನೀರು ಬಿಡಲು ಜಾತಿಯ ನೋಡಿದರೆ, ಅದು ಸಂಸ್ಕೃತಿಯಲ್ಲ, ವಿಕೃತಿ! ಸಂಪ್ರದಾಯಗಳು ನಿಂತ ನೀರಲ್ಲ, ಕಾಲಕ್ಕ್ಕೆ ತಕ್ಕಂತೆ ಅಗತ್ಯಗಳಿಗೆ ತಕ್ಕಂತೆ ಅವು ಬದಲಾಗಲೇ ಬೇಕು. ಆದರೂ ಸತ್ವವಿರುವ ಸಂಪ್ರದಾಯಗಳಿಗೆ ಜನ ಇಂದಿಗೂ ಯುವಜನ ತಲೆ ಬಾಗುತ್ತಾರೆ. ಮನೆಯ ಮುಂದೆ ತುಳಸಿ, ಹಂಚಿನ ಸೂರುಳ್ಳ ಮನೆ, ಮರದ ಕಲಾತ್ಮಕ ಗ್ರಹೊಪಯೋಗಿ ವಸ್ತುಗಳು, ಸಾವಯವ ಕೃಷಿ, ಹತ್ತಿ-ಖಾದಿ ಬಟ್ಟೆಗಳ ಬಳಕೆ, ಯೋಗ- ಧ್ಯಾನಗಳ ಅಭ್ಯಾಸ, ಆಯುರ್ವೇದ ಮೊದಲಾದವುಗಳು ದಿನದಿಂದ ದಿನಕ್ಕೆ ಜನಪ್ರಿಯವಾಗುತ್ತಿವೆ. ವೈಜ್ಞಾನಿಕವಾದ ರೂಢಿಗಳು ಎಂದಿಗೂ ಮಾನ್ಯತೆಯನ್ನು ಕಳೆದುಕೊಳ್ಳಲಾರವು.. ಪ್ರಶ್ನಿಸುತ್ತಾರೆ; ಸಹಜ, ಅಪೇಕ್ಷಿತ! ಅದಕ್ಕೆ ಸರಿಯಾದ ಉತ್ತರ ದೊರಕಿದರೆ ಪಾಲಿಸುತ್ತಾರೆ.
ಎಷ್ಟೇ ಕುಂದು- ಕೊರತೆಗಳಿರಲಿ 'ಮನಸ್ಸಿದ್ದರೆ ಮಾರ್ಗವಿದೆ' ಆದ್ದರಿಂದ ಸ್ನೇಹಿತರೆ, ಯೌವ್ವನದ ಈ ಸುವರ್ಣ ಯುಗದಲ್ಲಿ ಆ ಸಮಾಜ, ದೇಶಗಳನ್ನು ಔನ್ನತ್ಯದೆಡೆಗೆ ಕೊಂಡೊಯ್ಯೋಣ, ಭವ್ಯ ಭಾರತಿಯ ದಿವ್ಯ ಮೂರುತಿಯ ಪೂಜೆಗೈಯ್ಯೋಣ.
"ಹೊಸ ನೆತ್ತರುಕ್ಕುಕ್ಕಿ ಆರಿ ಹೋಗುವ ಮುನ್ನ,
ಹರೆಯದೀ ಮಾಂತ್ರಿಕನ ಮಾತಾ ಮಸಳುವ ಮುನ್ನ
ಕಟ್ಟುವೆವು ನಾವು ಹೊಸ ನಾಡೊಂದನು,
ರಸದ ಬೀಡೊಂದನು...."
ಅಲ್ಲವೇ?

-ನಿಷಾದ

Comments

  1. Idanna namma hiriyaru heLiddare Nishaada,

    purana mityeva na sadhu sarvam
    na chapi kavyam nava mitya vadyam
    santaha parikshan tarad bhajante
    mudaha para pratyayaneva buddihi

    Meaning:
    Not ALL that was Ancient is GOOD
    Not ALL that is modern is BAD
    Intelligent ones test everything and accept

    ReplyDelete

Post a Comment

Popular Posts