ನೆನಪುಗಳು


 

ನಿನ್ನ ನೆನಪುಗಳು- 

ಒಂಟಿತನದ ಕತ್ತಲೆಯ ರಾತ್ರಿಯಲಿ ನಕ್ಷತ್ರಗಳು, 

ಮಿನುಗಿ - ಮಿನುಗಿ ಹೆಚ್ಚಿಸುವುದು 

ಏಕಾಂಗಿಯ ತಿಮಿರದ ಸೊಬಗನ್ನು. 

ನಿನ್ನ ನೆನಪುಗಳು - 

ಬೇಸರದ ಚಳಿಹೊತ್ತಲ್ಲಿ ಉರಿಯುವ ಸೌದೆಗಳು,

ಮನಸಿಗೆ ಬೆಚ್ಚನೆಯ ಹಿತ ನೀಡುತಾ 

ನಿಗಿ- ನಿಗಿ ಹೊಳೆಯುತಾ

ಮೈಮನಸಿಗೆ ಈಯುವುದು ಹಬ್ಬವನ್ನು. 

ನಿನ್ನ ನೆನಪುಗಳು - 

ಕುಂದಾದ್ರಿಯ ಇಬ್ಬನಿಯ ಮೋಡಗಳು, 

ಭಾವಲಹರಿಯ ಸೂರ್ಯೋದಯವ ರಂಗೇರಿಸುತ್ತಾ 

ಕಟ್ಟುತ್ತವೆ ಮಾಯಾಲೋಕವನ್ನು. 

ನಿನ್ನ ನೆನಪುಗಳು - 

ಕ್ಷುಲ್ಲಕ ಬಾಳಿನ ನಡುವಿನ ಕಾಡಿನ ಬಗೆಗಿನ ಮಾತುಗಳು, 

ಆಡಿದಷ್ಟೂ ಸಾಲದೆ ಹುಚ್ಚೆಬ್ಬಿಸುವುದು ಹಸಿರು ಕನಸುಗಳನ್ನು. 

ನಿನ್ನ ನೆನಪುಗಳು - 

ನೀರವತೆಯ ಸಂಜೆಯಲಿ ದೂರದಿಂದ ತೇಲಿ ಬರುವ ಮೀರಾ ಭಜನೆಗಳು,

ಬೀಸುವ ಗಾಳಿಯಲ್ಲೂ ಪಸರಿಸುವುದು ಅದಮ್ಯ ಪ್ರೇಮವನ್ನು.


- ನಿಷಾದ 

Comments

Popular Posts