ಒಂದು ಮರದ ಸುತ್ತ

   


ಯಾವುದೋ ಕಾಲದ, ಪೀಚು- ಪೀಚಾಗಿ ಹೊಸಕಿದರೆ ನಲುಗಿ ಹೋಗುವಂತಹ ಬೆರಳೆಣಿಕೆಯಷ್ಟು ಮಾತ್ರ ಎಲೆಗಳಿದ್ದ ಗಿಡ, ಅದ್ಹೇಗೆ ದೈತ್ಯಾಕಾರದಲ್ಲಿ ಬೆಳೆದು, ಭೂಮಿಯಾಳಕ್ಕೆ ಬೇರು ಬಿಟ್ಟು, ತನ್ನ ಸುತ್ತೆಲ್ಲಾ ಬಿಳಲುಗಳ ಬಿಟ್ಟು, ಕತ್ತಿ - ಕೊಡಲಿಗಳಿಗೆ ತಲೆಬಾಗದ ಮರವಾಗಿದ್ದು? ನಿರಂತರವಾಗಿ ನೀರು - ಬೆಳಕು ಮತ್ತು ಮಣ್ಣಿನ ಸತ್ವವನ್ನು ಹೀರಿ, ಕಂಡರೂ ಕಾಣದ ರೀತಿಯಲ್ಲಿ, ಇನಿತೂ ಸದ್ದು ಮಾಡದೆ ಬೆಳೆಯುವ ಗಿಡಗಳು, ಸಣ್ಣ - ಸಣ್ಣ ಸಂತೋಷಕ್ಕೂ, ಹೆಮ್ಮೆಗೂ ಪಟಾಕಿ ಸಿಡಿಸಿ ಸಂಭ್ರಮಿಸುವ ನಮಗೆ ಪಾಠವೇ ಸರಿ. ಕಣ್ಣಿಗೆ ಕಾಣುವ ತಂಪು ನೀಡುವ ಕಾನನಗಳು ನನ್ನಲ್ಲೆಂದೂ ಕೌತುಕ ಹುಟ್ಟಿಸುವ ಜೀವ- ಸಾಗರ. 

ಈ ಚಿತ್ರದಲ್ಲಿರುವ ಕೂದಲಿನ ಸಿಕ್ಕಿನಂತೆ ಗಂಟುಹಾಕಿಕೊಂಡಿರುವ ಮರ, ಕೇರಳದ ತ್ರಿಶ್ಶೂರಿನ ಶಕ್ತನ್ ಅರಮನೆಯ ಚಿಟ್ಟೆ ಉದ್ಯಾನವನದಲ್ಲಿರುವುದು. ಕೇರಳದ ಅರಮನೆಗಳು ನೋಡಲು ಬಹಳ ಸರಳ. ಹಂಚಿನ ಮಾಡು, ಮರದ ಕೆತ್ತನೆಗಳು, ಅಷ್ಟೇನೂ ಎತ್ತರವಿಲ್ಲದ ಮೇಲ್ಛಾವಣಿಗಳು ಮತ್ತು ಕಣ್ಣು ಕುಕ್ಕದ ಬಣ್ಣ ಮಾಸಿದ ಗೋಡೆಗಳು, ಹೆಚ್ಚೆಂದರೆ ಬಿಳಿಯ ಬಣ್ಣವನ್ನು ಹೊಸದಾಗಿ ಬಳಿದಿರುತ್ತಾರೆ. ಅರಮನೆಗಳ ಶ್ರೀಮಂತಿಕೆ ಛಾವಣಿಯ ಮರದ ಕೆತ್ತನೆಗಳ ಸಂಕೀರ್ಣತೆ, ಅರಮನೆಯ ವಿಸ್ತೀರ್ಣ ಮತ್ತು ಉಪಯೋಗಿಸಿದ ಮರಗಳ ಗುಣಮಟ್ಟ ಇವುಗಳಿಂದ ಗೊತ್ತಾಗಬೇಕೇ ಹೊರತು, ಮೈಸೂರು - ಜೈಪುರದ ಅರಮನೆಗಳಂತೆ ಕಣ್ಣಿಗೆ ರಾಚುವ ಸಿರಿವಂತಿಕೆ ಇಲ್ಲಿಲ್ಲ. ಆದರೆ ಹಳೆಯ ಹಳ್ಳಿ ಮನೆಗಳ ನೆನಪು ತರುವ ಕೇರಳದ ಅರಮನೆಗಳು ನನ್ನ ಮನಸಿಗೆ ಆಪ್ತ. ಯಾವ ಅರಮನೆಗೆ ಹೋದರೂ, ಯಾವುದಾದರೊಂದು ಮೂಲೆಯ ಕಿಟಕಿಯ ಕಟ್ಟೆಯ ಮೇಲೆ ಕುಳಿತು, ಅಲ್ಲಿಂದ ಕಾಣುವ ಕೆರೆಯೋ ಕಾಡೋ ನೋಡುತ್ತಾ, ಆ ಅರಮನೆಯಲ್ಲಿ ಆಗಿಹೋದ, ಇತಿಹಾಸದ ಕನ್ನಡಕಕ್ಕೆ ಕಾಣದ ಕಥೆಗಳಲ್ಲಿ ಮುಳುಗಿಹೋಗಿಬಿಡಬೇಕೆನಿಸುತ್ತದೆ. 

ಈ ಚಿತ್ರದಲ್ಲಿರುವ ಮರವು ಹೀಗೆ ಕಿಟಕಿಯ ಎಷ್ಟು ನೆಟ್ಟ ದಿಟ್ಟಿಗಳನ್ನು ಎದೆಗೊಂಡಿರಬಹುದು? ಆ ಕಣ್ಣುಗಳ ಕನಸುಗಳ ಕಾವನ್ನು ಹಂಚಿಕೊಂಡಿರಬಹುದು? ಎಷ್ಟು  ನಿಟ್ಟುಸಿರು - ಬಿಸುಪುಗಳನ್ನು ಅರಗಿಸಿಕೊಂಡಿರಬಹುದು? ಅರಮನೆಯಲ್ಲಿ ಹೆಣೆದುಕೊಳ್ಳುವ ಸಂಕೀರ್ಣ ಕಥನಗಳ ಪಡಿನೆಳಲೋ ಎಂಬಂತೆ ಈ ಮರವೂ, ಬೇರೂ ಇಲ್ಲದ, ಕಾಂಡವೂ ಅಲ್ಲದ ತನ್ನ ಸಾಮ್ರಾಜ್ಯವನ್ನು ಒಪ್ಪ - ಓರಣವಿಲ್ಲದೆ ಗಂಟು - ಗಂಟಾಗಿ ಹರಿಬಿಟ್ಟಿದೆಯೇನೋ ಎಂದೆನಿಸಿತು. ಇದೇನೋ ಗೀಚುತ್ತಿದ್ದೇನೆ, ಗೊತ್ತು- ಗುರಿಯಿಲ್ಲದೆ, ಏನೇನೋ ವಿಚಾರಗಳು ತಲೆಯಲ್ಲಿ ಭೋರ್ಗರೆಯುತ್ತಿವೆ, ತಲೆ - ಬಾಲವಿಲ್ಲದೆ. ಬರೆಯುಬೇಕಾಗಿರುವುದು ಮರದ ಬಗ್ಗೆಯೋ? ಅರಮನೆಯಲ್ಲಿ ಅಧಿಕಾರದ ಬಿಸಿಗೆ ಆವಿಯಾದ ಅದೃಶ್ಯ ಕಥೆಗಳ ಬಗ್ಗೆಯೋ? 

ಏನು ಗೊತ್ತು ನನಗೆ ಆ ಜೀವಗಳ ಬಗ್ಗೆ? ಆ ಕಥೆಗಳ ಬಗ್ಗೆ, ಅವರ ಬಗ್ಗೆ ಬರೆಯಲು? ನಾನೇನು ಅವರನ್ನು ನೋಡಿದ್ದೇನೆಯೋ ಅಥವಾ ನೋಡಿದವರ ಬಾಯಿಂದ ಕೇಳಿದ್ದೇನೆಯೋ ? ಆದರೂ ಏನೋ ಕುತೂಹಲ. ಕಿಟಕಿಯ ಸರಳುಗಳ ಹಿಂದೆ ಬಂಗಾರದ ಬಳೆಗಳ ತೊಟ್ಟು ಅವುಗಳನ್ನು ಸಂಕೊಲೆಯೆಂದು ಭ್ರಮಿಸಿದ ಜೀವಗಳಿದ್ದಿರಬಹುದೇ ? ಉಟ್ಟ ಹೊನ್ನಿನಂಚಿನ ಬಿಳಿಯ ಸೀರೆಯ ಹಿಂದೆ ಮಾಸಿದ ಬಣ್ಣದ ಕನಸುಗಳಿದ್ದಿರಬಹುದೇ ? ರವಿಕೆಯಿಲ್ಲದೆ ಎಡ ಕಂಕುಳದ ಹತ್ತಿರ ಬಿಗಿದು ಕಟ್ಟಿದ ಹತ್ತಿ- ರೇಷ್ಮೆಯ ನೆರಿಗೆಗಗಳಲ್ಲಿ ಅಡಗಿರಬಹುದೇ ರಹಸ್ಯ ಪ್ರಣಯಗಾಥೆಗಳು ?  ದಟ್ಟ ಕಣ್ಣ ಕಾಡಿಗೆಯಲ್ಲಿ, ಕಾಸಗಲ ಕುಂಕುಂಮ, ಅಡ್ಡಪಟ್ಟಿಯ ಚಂದನದಲ್ಲಿ, ತೆಂಗಿನೆಣ್ಣೆಯ ಪರಿಮಳ ಸೂಸುವ ಕಟ್ಟಿಟ್ಟ ಗುಂಗುರು ಕೂದಲುಗಳಲ್ಲಿ ಅಡಗಿತ್ತೇ, ದೇಶವಾಳುವ ಹಂಬಲ? ಗಡಿಯ ಪರಿವೆಯಿಲ್ಲದೆ ತಿರುಗಾಡುವ ಹುಚ್ಚು? ಜಾತಿಯಲ್ಲದ ಯುವಕನೆಡೆಗೆ ಪ್ರೇಮ? ಅಥವಾ ತನ್ನಂತೆಯೇ ಇರುವ ಯುವತಿಯೆಡೆಗೆ ಪ್ರೇಮ? ಅಥವಾ ಇದಾವುದೂ ಅಲ್ಲದ ವ್ಯಥೆ? ಯಾರಿಗೆ ಗೊತ್ತು ? ಯಾರಿಗೆ ಬೇಕು ಈ ಕಥೆಗಳು ? ಎಲ್ಲರೂ ಓದಿದ್ದು, ಅಭ್ಯಸಿಸಿದ್ದು, ತಿಳಿಯಲು ಕುತೂಹಲಿಸಿದ್ದು ದರ್ಬಾರದಲ್ಲಿ ನಡೆದ ಆಡಂಬರದ ನೈಜತೆಯಿಲ್ಲದ ಮಾತು - ಕಥೆಗಳ ಬಗ್ಗೆ, ಕೃತಕ ಅಧಿಕಾರದ ಸಂಸ್ಥೆಗಳ ಬಗ್ಗೆ, ಮನಸಾರೆ ಒಪ್ಪಿಕೊಳ್ಳದ ಕಾನೂನುಗಳ ಬಗ್ಗೆ ಮತ್ತು ಅರ್ಥವಿಲ್ಲದ ದಾನ- ಧರ್ಮಗಳ ಬಗ್ಗೆ. ಹಾಗಾಗಿ ಅದೃಶ್ಯ ಕಥೆಗಳ ಬಗ್ಗೆ ಬರೆಯುತ್ತಿಲ್ಲ ನಾನು. 

ಹೋಗಲಿ ಮರದ ಬಗ್ಗೆ ಬರೆಯುತ್ತೇನೆಂದುಕೊಂಡರೆ ನನಗೇನು ಗೊತ್ತು ಮರಗಳ ಬಗ್ಗೆ? ಒಂದು ಕಡೆ ಕಾಲೂರಿ ನಿಲ್ಲಲೂ ಆಗದೆ, ನಿರಂತರವಾಗಿ ಓಡುವ ದೇಹ - ಮನಸುಗಳಿಗೆ, ನಿಂತಲ್ಲಿ ನಿಲ್ಲುವ - ಬೇರೂರುವ - ಸ್ಥಿರತೆ ತಂದುಕೊಳ್ಳುವವರೆಗಿನ ಪಯಣದ ಬಗ್ಗೆ ಹೇಗೆ ತಿಳಿದೀತು ? ಅದು ಸ್ಥಿರತೆಯೆಡೆಗಿನ ಪಯಣವೇ ಸರಿ. ಮರ ಸ್ಥಾಯಿಯಲ್ಲ, ಜಡತ್ವವಲ್ಲ, ಜೀವಹೀನವಲ್ಲ. ಚಿವುಟಿದರೆ ಕಮರಿಹೋಗುವ ಸ್ಥಿತಿಯಿಂದ ಅಲುಗಾಡಿಸಲು ಪ್ರಾಯಾಸಪಡುವವರೆಗಿನ ಬಲಿಯುವ ಮರದ ಪ್ರಗತಿ ಒಂದು ಯಾತ್ರೆಯೇ ಸರಿ. ಆದರೆ ಬಾನಹಕ್ಕಿಗೆ ಅದೆಲ್ಲಿ ಅರ್ಥವಾದೀತು? ಅದರ ಪಾಲಿಗೆ ಮರ ಒಂದು ಏಕತಾನತೆಯ ಚಿಹ್ನೆ. ಆದರೆ ಅಲ್ಲೊಂದು ಕುತೂಹಲಭರಿತ ಸ್ನೇಹವಿದೆ. ಜೀವ ನೆರಳ ಬೇಡಿದಾಗಲೆಲ್ಲ ಹಕ್ಕಿ ಬಂದಿಳಿಯುವುದು ಈ ಮರಗಳಿಗೇ! ಮನೆ - ಮಕ್ಕಳ ಮಾಡಿಕೊಂಡು ಆ ಮರದೊಟ್ಟಿಗಿನ ಬಂಧ ಗಟ್ಟಿ ಮಾಡಿಕೊಳ್ಳುವ ಈ ಬಾನುಲಿಯ ಪಾಲಿಗೆ ಮರದ ವ್ಯಕ್ತಿತ್ವ ಮಾತ್ರ ನೀರಿಳಿಯದ ಗಂಟಲಿಗೆ ಕಡುಬಿದ್ದಂತೆ. ನಮ್ಮ ಜೀವನವೂ ಹೀಗೆ, ಯಾರ್ಯಾರಿಗೋ ಜೀವನವಿಡೀ ಆತುಕೊಳ್ಳುತ್ತೇವೆ, ಕಂಡರೆ ಅಚ್ಚರಿಪಡುತ್ತೇವೆ, ಉಪಯೋಗ ಪಡೆದುಕ್ಕೊಳ್ಳುತ್ತೇವೆ, ಆದರೆ ಅವರು ಮಾತ್ರ ಅರ್ಥವಾಗುವುದಿಲ್ಲ.

ತ್ರಿಶ್ಶೂರಿನ ಈ ಮರಕ್ಕೆ ಅದೆಷ್ಟು ಜೀವಗಳು ಆತುಕೊಂಡಿದ್ದಿರಬಹುದು, ಅದು ಅರ್ಥವಾಗದೇನೇ? ಹೋಗಲಿ ಈ ಪ್ರಶ್ನೆಗಳಿಗಾದರೂ ಅರ್ಥವಿದೆಯೇ? ಏನೋ ಬರೆಯಲು ಹೋಗಿ ಏನೋ ಬರೆಯುವುದು, ಏನೋ ಮಾಡಲು ಹೋಗಿ ಮತ್ತಿನ್ನೇನೋ ಮಾಡುವುದು. ಒಡಕು ಹಾರ್ಮೋನಿಯಂ ಪೆಟ್ಟಿಗೆ ಆಗಿದೆ ಈ ತಲೆ. ಖುಷಿಯಲ್ಲಿ ರಾಗವೊಂದನ್ನು ಗುನುಗಲು 'ಪ' ಒತ್ತಿದರೆ, ಪಕ್ಕದಲ್ಲಿಯ ಕೋಮಲ 'ಧ' ಅಪಸ್ವರದಲ್ಲಿ ಪೇ... ಎಂದುಕೊಳ್ಳಲು ಶುರುವಿಟ್ಟುಕೊಳ್ಳುತ್ತದೆ. ಮುಗಿಲು ಮುಟ್ಟಿದ ಸಂತಸದಲ್ಲಿ ಭೂಪ ಹಾಡಲು ಹೋದರೆ, ಹಳೆಯ ನೋವಿನ ಸೆಳೆಗಳು ಬಾಗೇಶ್ರೀಯ ವೇದನೆಯ ಸ್ವರಗಳ ತಂದು ಅಪಶ್ರುತಿಯ ಸದ್ದು ಮಾಡುತ್ತವೆ. ಯಾರಿಗ್ಗೊತ್ತು, ಮರವೂ ಹೀಗೆಯೇ ಹಾರಾಡಬೇಕೆಂದು ಶಕ್ತಿ ಪಡೆಯುವುದಕ್ಕೇ ದೊಡ್ಡಾದಾಗಲೂ ಹಂಬಲಿಸಿತ್ತೇನೋ? ಆದರೆ ಹಂಬಲ ಹೆಚ್ಚಿದಷ್ಟೂ ಕಾಂಡ ದೊಗರಾಯ್ತು, ಬೇರು ಕೆಳಕ್ಕಿಳಿಯುತು. ಜೊತೆಯಲ್ಲಿ ಹಾರುವ ಸಾಧ್ಯತೆ, ಸಾಧ್ಯತೆಯಾಗಿಯೂ ಉಳಿಯಲಿಲ್ಲ. ನಾನ್ಯಾರು ಹಕ್ಕಿಯೋ, ಮರವೋ? ನೆಲದಲ್ಲಿ ತೆವಳುವ ಹಾವೊ? ಓಡುವ ಜಿಂಕೆಯೋ ? ಗುರಿಯಿಟ್ಟು ಬೇಟೆಯಾಡುವ ಹುಲಿಯೋ? ಜೀವ ಧಾರೆಯೇರುವ ದನವೋ? ಯಾರು ನಾನು? ಅಥವಾ ಹೀಗೆ ಅರ್ಥವಿಲ್ಲದ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಾ, ನನಗರಿವಿಲ್ಲದೆಯೇ ಬೇರು ಬಿಡುತ್ತಿರುವ ಇನ್ನೊಂದು ಮರವೋ? 

- ನಿಷಾದ 

Comments

  1. Nice one... ಲೇಖನದಲ್ಲಿ ಶಬ್ದಗಳ ಬಳಕೆ ತುಂಬಾ ಚೆನ್ನಾಗಿದೆ...👏👏👏👍

    ReplyDelete

Post a Comment

Popular Posts