ಗುಟ್ಟು



ಬಹಳ ದಿನಗಳಾಯ್ತು ನಾನು ಈ ವಿಷಯದ ಕುರಿತು ಬರೆಯಬೇಕೆಂದು ಅನಿಸಲು ತೊಡಗಿ. ಆದರೆ ಈ ವಿಷಯದ ಬಗ್ಗೆ ಬರೆಯುವುದು ಹೇಗೆ, ಅದನ್ನು ಓದಿದವರು ಏನಂದುಕೊಳ್ಳುತ್ತಾರೆ, ಯಾವ ಉದ್ದೇಶವನ್ನು ನಾನು ಈ ವಿಷಯದ ಕುರಿತು ಬರೆದು ಹೊರಟಿದ್ದೇನೆ ಸಾಧಿಸಲು ಹೊರಟಿದ್ದೇನೆ ಎಂಬುದರ ಬಗ್ಗೆ ಆಲೋಚಿಸಿ, ತಲೆ ಕೆಡಿಸಿಕೊಂಡು ಬರೆಯದೆ ಕುಳಿತೆ. ಆದರೆ ಈಗ ಕೋವಿಡ್ 19 ರ ಅಟ್ಟಹಾಸ ಜಾಸ್ತಿಯಾಗುತ್ತಿದೆ, ಅಂಫಾನ್ ಚಂಡಮಾರುತ ಬಂದಾಯ್ತು, ಭೂಕಂಪಗಳು ಒಂದರ ಹಿಂದೆ ಒಂದು ಬರುತ್ತಲೇ ಇವೆ, ಸಾಲದ್ದಕ್ಕೆ ಅತಿವೃಷ್ಟಿಯೂ ಆಗಬಹುದು ಎನ್ನಲಾಗಿದೆ. ಇನ್ನೂ ಬರೆಯದೆ ಕುಳಿತರೆ ನಾಳೆ ಓದಲಿಕ್ಕೆ ನೀವಿರುತ್ತೀರೋ, ಅಥವಾ ಬರೆಯಲಿಕ್ಕೆ ನಾನಿರುತ್ತೇನೋ, ಕಾಣೆ. ಅದಕ್ಕಾಗಿಯೇ ಅಂತೂ, ಇಂತೂ ಈ ವಿಷಯದ ಕುರಿತು ಬರೆಯಲು ನಿರ್ಧರಿಸಿದೆ.
ಈ ವಿಷಯವನ್ನು ಜಗತ್ತಿನ ಅರ್ಧ ಜನರು ಅನುಭವಿಸಿರುತ್ತಾರೆ ಹಾಗೂ ಇನ್ನರ್ಧ ಜನರು ಅನುಭವಿಸುವವರನ್ನು ಹತ್ತಿರದಿಂದ ನೋಡುತ್ತಿರುತ್ತಾರೆ. ಈ ವಿಷಯದ ಕುರಿತು ಎಲ್ಲರಿಗೂ ಗೊತ್ತು, ಆದರೆ ಮಾತನಾಡುವುದು ಮಾತ್ರ ಗುಟ್ಟಿನಲ್ಲಿ. ಕೆಲವರು ಈ ವಿಷಯದ ಕುರಿತು ಇತ್ತೀಚೆಗೆ ಏರುದನಿಯಲ್ಲಿ ಮಾತನಾಡುತ್ತಿದ್ದರೂ, ಜನಸಾಮಾನ್ಯರು ಈ ವಿಷಯದ ಕುರಿತು ಇನ್ನು ಗುಟ್ಟು ರಟ್ಟು ಮಾಡಿಲ್ಲ.
9ನೇ ತರಗತಿಯಲ್ಲಿದ್ದೆ ನಾನು. ಅದಾಗಲೇ ನನ್ನ ವಾರಿಗೆಯ ಗೆಳತಿಯರೆಲ್ಲರಿಗೂ ಈ ವಿಷಯದ ಅನುಭವವಾಗಿತ್ತು. ಅವರೆಲ್ಲರೂ ಹಲವಾರು ಸಾರಿ ನನಗೆ ಅವರ ತಜ್ಞ ಅಭಿಪ್ರಾಯಗಳನ್ನು ನೀಡಿಯೂ ಆಗಿತ್ತು, ಗುಟ್ಟಿನಲ್ಲಿ. ಹೀಗಿರುವಾಗ ಒಂದು ದಿನ ಸೈಕಲ್ ಸವಾರಿ ಮಾಡುತ್ತಾ, ಹಾಡು ಹೇಳುತ್ತಾ, ಪೆಡಲ್ ತುಳಿಯುತ್ತಿದ್ದ ನನಗೆ ಏನೋ ಒದ್ದೆಯಾದಂತೆ ಅನುಭವವಾಯಿತು. ನನಗೆ ಗೊತ್ತಾಯ್ತು ಎರಡೇ ಸೆಕೆಂಡ್ನಲ್ಲಿ, ಇದು ಈ ವಿಷಯವೆಂದು. ಆದರೆ ಈ ವಿಷಯ ಬಂದರೆ ರಜ ಹಾಕುತ್ತಿದ್ದ ಗೆಳತಿಯರ ಹಾಗೆ ನನಗೇನು ಆಗದಿರುವುದನ್ನು ಕಂಡು ಆಶ್ಚರ್ಯವಾಯಿತು. ಶಾಲೆಗೆ ಹೋಗಿ ತಲುಪಿದ ಮೇಲೆ ನೇರವಾಗಿ ನಾನೆಂದು ಕಾಲಿಡದ ಆ ಗಲೀಜು ಶೌಚಾಲಯಕ್ಕೆ ಹೋಗಿ ಖಾತ್ರಿ ಮಾಡಿಕೊಂಡೆ. ಆಗ ಇನ್ನು ಬೆಳಗ್ಗೆ ಒಂಭತ್ತೂವರೆ. ಫಜೀತಿಯಾಯ್ತಲ್ಲ, ಮನೆಗೆ ಹೋಗಬೇಕಲ್ಲ ಮತ್ತು ಶಾಲೆಗೆ ರಜೆ ಹಾಕಲೇ ಬೇಕಲ್ಲ? ಹೇಗೆ ರಜೆ ಕೇಳುವುದು? ಸಮಸ್ಯೆ ಆಯ್ತು. ತಜ್ಞ ಗೆಳತಿಯ ಅಭಿಪ್ರಾಯ ಕೇಳಿದೆ. ಅವಳು ಒಂದು ರಹಸ್ಯ ಕಾರ್ಯಾಚರಣೆಗೆ ಹೋರಾಟ ಸೈನಿಕನೊಂದಿಗೆ ಮಾತಾಡುವ ಧಾಟಿಯಲ್ಲಿ ಹೇಳಿದಳು, "ಹೋಗು, ಮಿಸ್ ಹತ್ರ ಹೊಟ್ಟೆನೋವೆಂದು ಹೇಳು, ಅವರಿಗೆಲ್ಲ ಅರ್ಥವಾಗುತ್ತದೆ" ಎಂದು. ಸ್ಟಾಫ್ ರೂಮ್ ಗೆ ಹೋದೆ. ಅಲ್ಲಿ ಸರಸ್ವತಿಯ ಫೋಟೋ ಗೋಡೆಯಲ್ಲಿ ತೂಗುತ್ತಿತ್ತು. ಥಟ್ಟನೆ ಅನಿಸಿದ್ದು, "ಅಯ್ಯೋ, ಸರಸ್ವತಿಗೆ ಮೈಲಿಗೆಯಾಗಲ್ಲವೇ?" ಅಪರಾಧ ಪ್ರಜ್ಞೆ ಕಾಡಿತು. ತಕ್ಷಣ ಹೊರಗೋಡಿದೆ. ನಮ್ಮ ಕ್ಲಾಸ್ ಟೀಚರು ಕಿಟಕಿಯ ಪಕ್ಕ ಕೂರುತ್ತಿದ್ದರು. ಕಿಟಕಿ ಹತ್ತಿರ ಹೋಗಿ "ಮಿಸ್, ಹೊಟ್ಟೆ ನೋಯ್ತಿದೆ, ಮನೆಗೆ ಹೋಗ್ಲಾ?" ಎಂದು ಕೇಳಿದೆ. ನನ್ನ ಧ್ವನಿ ಯಾವತ್ತಿಗೂ ಸ್ವಲ್ಪ ದೊಡ್ಡದೇ, ಕಸಿವಿಸಿಯಲ್ಲಿ  ಈ ವಿಚಾರದ ಬಗ್ಗೆ ಮಾತನಾಡುವಾಗ ಗುಟ್ಟು ಮಾಡಬೇಕೆಂಬುದು ಮರೆತು ಹೋಗಿತ್ತು. ರೂಮಿನಲ್ಲಿದ್ದ ಎಲ್ಲಾ ಅಧ್ಯಾಪಕ- ಅಧ್ಯಾಪಕಿಯರು ಕಿಟಕಿಯ ಕಡೆ ತಿರುಗಿದರು, ನನ್ನ ಪ್ರಶ್ನೆ ಕೇಳಿ. ಇದರಿಂದ ನನಗಿಂತ ಜಾಸ್ತಿ, ನನ್ನ ಕ್ಲಾಸ್ ಟೀಚರ್ ಹೈರಾಣಾದರು. ಅವರು ಕಣ್ಣಲ್ಲೇ ಗದರಿಸಿ "ಆಯ್ತು, ಮನೆಗೆ ಬೇಗ ಹೋಗು" ಎಂದು ಹೇಳಿದರು. ಅವರ ಮುಖದಲ್ಲಿ ಈ ವಿಷಯದ ಅನುಭವ ಅವರಿಗೆ ಇದ್ದದ್ದು ಬರೆದಿಟ್ಟಂತೆ ಸ್ಪಷ್ಟವಾಗಿತ್ತು. ಅಷ್ಟೇ ಯಾಕೆ, ಅಲ್ಲಿರುವ ಎಲ್ಲರಿಗೂ ನನಗಾಗಿದ್ದು ಏನು ಎಂದು ಗೊತ್ತಾಯಿತು ಎಂದು ನನಗೆ ಗೊತ್ತಾಯಿತು. ಎಲ್ಲರಿಗೂ ಗೊತ್ತಿರುವ ವಿಚಾರ ಯಾಕೆ ಹೀಗೆ ಗುಟ್ಟಾಗಿಡಬೇಕು ಎಂಬ ಪ್ರಶ್ನೆ ಮೂಡಿತು ಮನಸಲ್ಲಿ.  ಆದರೂ ಹೀಗೆ ಅನಿಸಿದ್ದು ಈ ವಿಷಯದ ಕುರಿತಾದ್ದರಿಂದ ತರ್ಕಬದ್ಧವಾದ ಉತ್ತರಗಳನ್ನು ಹುಡುಕಲು ಹೋಗದೇ, ಮನೆಗೆ ಹೋದೆ.
ಶಾಲೆಗೆ ಹೋದ ಒಂದು ತಾಸಿನೊಳಗೆ ವಾಪಸ್ಸು ಬಂದ ನಾನು ನೇರವಾಗಿ ಅಮ್ಮನ ಬಳಿಗೆ ಹೋಗಿ ಈ ವಿಷಯದ ಕುರಿತು ಹೇಳಿದೆ. ಅಮ್ಮ ಗಾಬರಿಯಾದಳೋ, ಸಂಕಟಪಟ್ಟಳೋ, ಸಂತೋಷಪಟ್ಟಳೋ, ಅಥವಾ ಇದೆಲ್ಲಾ ಅವಳಿಗೆ ಒಂದೇ ಸಮಯಕ್ಕೆ ಆಯಿತೋ, ಗೊತ್ತಾಗಲಿಲ್ಲ. ಸ್ನಾನದ ಮನೆಗೆ ನನ್ನನ್ನು ಅಟ್ಟಿದಳು. ಆಗಷ್ಟೇ ಸ್ನಾನ ಮುಗಿಸಿ ಶಾಲೆಗೆ ಹೋಗಿದ್ದ ನಾನು ಗೊಣಗುತ್ತಾ ಸ್ನಾನ ಮಾಡಲು ಹೋದೆ. ಅಮ್ಮ 'ಅವಶ್ಯಕ ಸಾಮಾಗ್ರಿ'ಗಳ ಬಂದೋಬಸ್ತ್ ಮಾಡಿದಳು. ಸ್ನಾನವಾದ ಮೇಲೆ ಮಲಗಿಕೊಂಡು ಯಾವುದೋ ಪುಸ್ತಕ ಓದುತ್ತಾ ಇದ್ದೆ, ಗೋಡಂಬಿ ದ್ರಾಕ್ಷಿ ತುಂಬಿದ ಪಾತ್ರೆ ಹಿಡಿದು ಅಮ್ಮ ಬಂದಳು. ಅಮ್ಮ ಏನು ಮಾತನಾಡಿದಳು ಎಂದು ನನಗೀಗ ನೆನಪಿಲ್ಲ. ಆದರೆ ಅಮ್ಮನಿಗೆ ಈ ವಿಷಯದ ಕುರಿತು ಮಾತನಾಡುವುದಕ್ಕೆ ಅಷ್ಟು ಮುಜುಗರ ಇರಲಿಲ್ಲ ಎಂಬುದು ನೆನಪಿದೆ. ಶಾಲೆಗೆ ಹೋಗಿ ವಾಪಸ್ಸು ಬಂದು ಹಾಡು ಗುನುಗುನಿಸುತ್ತ, ಫ್ಯಾನು ನೋಡುತ್ತಾ ಮಲಗಿದ್ದ ನನ್ನ ಕಂಡು, ಅಪ್ಪಯ್ಯ ನನ್ನ ಹತ್ತಿರ ಏನೂ ಕೇಳಲಿಲ್ಲ. ನೇರವಾಗಿ ಅಡುಗೆ ಮನೆಗೆ ಹೋಗಿ ಅಮ್ಮನ ಹತ್ತಿರ ಮಾತನಾಡಿ, ಬೆಳಗ್ಗೆ ೧೧.೦೦ ಘಂಟೆಯ ಚಹಾ ಕುಡಿದು, ಆಫೀಸಿಗೆ ಹೋದ. ಪೇಟೆ ಮನೆಯಲ್ಲಿದ್ದ ನಮಗೆ ಈ ವಿಷಯವಿದ್ದರೂ 'ದೂರ ಕೂರುವುದು' ಪ್ರಾಯೋಗಿಕವಾಗಿರಲಿಲ್ಲ. ಹಾಗಾಗಿ ನಾವು ಆ ದಿನಗಳಲ್ಲಿ ದೇವರನ್ನೇ ದೂರ ಕೂರಿಸುತ್ತಿದ್ದೆವು!! ನನಗಂತೂ ಎಷ್ಟೋ ಸಾರಿ ಅನಿಸಿದ್ದಿದೆ, ಕನಿಷ್ಠ ದೇವಿಯರಿಗಾದರೂ ಪೂಜೆ ಮಾಡಬಹುದಲ್ಲವೇ? ದೇವಿ ತಾಯಿಸ್ವರೂಪಿಯಲ್ಲವೇ, ನನ್ನಮ್ಮನಂತೆ ಅವಳಿಗೂ ಮುಜುಗರ ಕಡಿಮೆಯಿರಬಹುದಲ್ಲವೇ ಎಂದು. ಅದಕ್ಕೆ ಸಿಕ್ಕ ಉತ್ತರ, "ದೇವಿಯರಿಗೆ ಮಡಿ- ಮೈಲಿಗೆ ಜಾಸ್ತಿ ಎಂದು".
ಜೀವನ ಹೀಗೆಯೇ ಸಾಗುತ್ತಿತ್ತು. ನೋವಿಲ್ಲದೇ ಆ ದಿನಗಳು ಆರಂಭವಾಗಿದ್ದರೂ ಕೆಲವೊಮ್ಮೆ ಭಯಂಕರವಾದ ಯಾತನೆಯಿರುತ್ತಿತ್ತು. ಆದರೂ ಪ್ರತಿ ಸಾರಿಯೂ ಈ ವಿಷಯವನ್ನು ಗುಟ್ಟಾಗಿಟ್ಟು, ಆ ದಿನಗಳಲ್ಲಿ ದೇವರನ್ನು ಉಪೇಕ್ಷಿಸುತ್ತಾ, ಪ್ರವಾಸ, ಮದುವೆ - ಮುಂಜಿಗಳಿಗೆ ಹೋಗುವುದನ್ನು ಈ ದಿನಗಳನ್ನು ಅಂದಾಜು ಮಾಡೇ ನಿರ್ಧರಿಸುತ್ತಾ, ಅಂದಾಜು ತಪ್ಪಿ ಆದಾಗ, ಗೆಳತಿಯ ಮದುವೆಗೆ ಹೋಗಲಾಗದ ನೋವು ತೋರಿಸದೆ, ಏನನ್ನೂ ಪ್ರಶ್ನೆ ಮಾಡದೆ, ದಿನಗಳು ಸಾಗುತ್ತಿದ್ದವು, ಕಾಮಾಖ್ಯ ದೇವಿಯ ದರ್ಶನವಾಗುವವರೆಗೆ.
ಕಾಮಾಖ್ಯದ ಪ್ರಾಂಗಣಕ್ಕೆ ಕಾಲಿಡುತ್ತಿದ್ದಂತೆ, ದೇವಸ್ಥಾನದ ಹೊರಬದಿಯ ಭಿತ್ತಿಯಲ್ಲೊಂದು ಕೆತ್ತನೆ ನನ್ನ ಗಮನ ಸೆಳೆಯಿತು. ತುಂಬಿದ ಸ್ಥನಗಳೊಂದಿಗೆ ತುಸು ಸ್ಥೂಲಕಾಯದ ಮಹಿಳೆಯೊಬ್ಬಳು ನಗ್ನವಾಗಿ ಕಾಲು ಅಗಲಿಸಿ ಕುಳಿತಿದ್ದಾಳೆ, ಅವಳ ಯೋನಿಯಿಂದ ರಕ್ತ ತೊಟ್ಟಿಕ್ಕುವಂತೆ ಕಾಣಿಸುತ್ತಿತ್ತು, ಹಚ್ಚಿದ ಕುಂಕುಮದಿಂದ. ಆ ಕೆತ್ತನೆಗೆ 'ಅಂಬಾಟಿ' ಎಂದು ಪೂಜೆಗೈಯ್ಯಲಾಗುತ್ತದೆ ಎಂದು ಅಲ್ಲಿಯ ಪಂಡರೊಬ್ಬರು (ಪೂಜಾರಿ) ಹೇಳಿದರು. ಅದನ್ನು ನೋಡಿದ ನನಗೆ ಕ್ಷಣಕಾಲ ಹೇಗೆ ಪ್ರತಿಕ್ರಿಯಿಸಬೇಕೋ ಎಂದು ತಿಳಿಯದಾಯಿತು. ಹೆಣ್ತನ, ತಾಯ್ತನ ಮತ್ತು ಪ್ರಕೃತಿಯ ಸೊಗಡು ಬಹಳ ಅರ್ಥವತ್ತಾಗಿ, ಯಾವುದೇ ಹಿಂಜರಿಕೆಯಿಲ್ಲದೇ, ಭಕ್ತಿಪೂರ್ವಕವಾಗಿ ಅಭಿವ್ಯಕ್ತಿಯಾಗಿರುವ ಶಕ್ತಿಪೀಠ ಆಸ್ಸಾಮಿನ ಗುವಾಹಾಟಿಯಲ್ಲಿರುವ ಕಾಮಾಖ್ಯ ದೇವಿಯ ದೇವಸ್ಥಾನ. ಯೋನಿಸ್ವರೂಪಿಯಾದ ದೇವಿಯ ದರ್ಶನವಾಗುತ್ತಿದಂತೆ ಏನೋ ಒಂದು ರೋಮಾಂಚನ, ಹೊಸ ಬೆಳಕು ಮೂಡಿದಂತೆ. ರಜಸ್ವಲೆ ಆದಾಗಿನಿಂದ ಅಂದಿನವರೆಗೆ ಯಾವುದೇ ಕಾರಣವಿಲ್ಲದೆ ಪಟ್ಟ ಮುಜುಗರವೂ, ಕೀಳರಿಮೆಯೂ ನನ್ನಲ್ಲಿ ಪಾಪಪ್ರಜ್ಞೆ ಮೂಡಿಸಿತು. ಹೀಗೆ  ವಿನಾ ಕಾರಣ, ಹೆಣ್ಣುಮಕ್ಕಳಲ್ಲಿ ಕೀಳರಿಮೆ ಮೂಡುವಂತೆ ಬೆಳೆಸಿದ ಮತ್ತು ಬೆಳೆಸುತ್ತಿರುವ ಸಮಾಜದ ಮೇಲೆ ಕೋಪ ಬಂತು. ಕವಿದಿದ್ದ ಮಂಜು ಮುಸುಕು ಕರಗಿದಂತಾಯಿತು. ಆ ಕ್ಷಣಕ್ಕೆ ನಿರ್ಧರಿಸಿದ್ದು, ಇನ್ನೆಂದೂ ಮುಟ್ಟಾಗುವುದನ್ನು ಕೀಳಾಗಿ ಕಾಣಲಾರೆ ಹಾಗೂ ಗುಟ್ಟಾಗಿಟ್ಟು ಆಜ್ಞಾವನ್ನು ಹರಡುತ್ತಿರುವುದರ ವಿರುದ್ಧ ಧ್ವನಿಯೇರಿಸುತ್ತೇನೆಂದು. ರಜಸ್ವಲೆಯಾದಾಗ ಪ್ರತೀ ತಿಂಗಳು ರಕ್ತ ಸ್ರಾವವಾಗಿ ನಿತ್ರಾಣವಾದಾಗ ಪ್ರತೀ ಹೆಣ್ಣು ಧ್ವನಿಯೇರಿಸಿ ಮಾತನಾಡಬೇಕು, ಪರಿಹಾರ ಕಂಡುಕೊಳ್ಳಬೇಕು. 
ಮುಟ್ಟಾದಾಗ ಹೆಣ್ಣುಮಕ್ಕಳು ದೂರ ಕೂರುವುದು, ದೇವರನ್ನು ದೂರವಿಡುವುದು ವೈಜ್ಞಾನಿಕವಾಗಿ ತಳಹದಿಯಿಲ್ಲದ ಒಂದು ಸಂಪ್ರದಾಯವೆಂಬುದು ನನ್ನ ಅಭಿಪ್ರಾಯವಾದರೂ, ಅದು ಅವರವರ ನಂಬಿಕೆ-ರೂಢಿಯ ವಿಚಾರ. ಆದರೆ ಹೆಣ್ಣು ಮಕ್ಕಳಲ್ಲಿ ಕೀಳರಿಮೆ ಬೆಳೆಸಬಾದರದು. ಮುಟ್ಟು ಅಸ್ಪ್ರಶ್ಯವಾದ ವಿಷಯವಾಗಬಾರದು. ಮುಟ್ಟಾಗದೆ ಹೆಣ್ತನವಿಲ್ಲ, ಹೆಣ್ಣಿಲ್ಲದೆ ಸೃಷ್ಟಿಯಿಲ್ಲ, ಇದು ಸತ್ಯ. ಹಾಗೆಂದ ಮಾತ್ರಕ್ಕೆ ಮುಟ್ಟಾಗದವಳು, ತಾಯಿಯಾಗದವಳು ಹೆಣ್ಣಲ್ಲ ಎಂಬುದಲ್ಲ. ಮುಟ್ಟಾಗುವುದು ಹೆಣ್ತನದ ಸಹಜ ಮತ್ತು ಅವಿಭಾಜ್ಯ ಅಂಗವೆಂದಷ್ಟೇ ನಾನು ಹೇಳಿದ್ದು. ವರ್ಷ-ವರ್ಷ ದೇವಿ ಮುಟ್ಟಾಗುವ ಸಮಯವನ್ನು ಹಬ್ಬವೆಂದು ಆಚರಿಸುವ ನಾವು, ನಮ್ಮ ಮನೆಯ ಹೆಣ್ಣುಮಕ್ಕಳು ರಕ್ತ ಬಸಿದರೆ ಸಂಕೋಚಪಡುವುದೇಕೆ? ಯಾಕೆ ಹೆಣ್ಣುಮಕ್ಕಳು ಅಪ್ಪಂದಿರು, ಅಣ್ಣಂದಿರು, ಗೆಳೆಯರು ಮತ್ತು ಅಜ್ಜಂದಿರ ಹತ್ತಿರ ರಜಸ್ವಲೆಯಾದಾಗ ಆಗುವ ನೋವು- ಕಷ್ಟಗಳನ್ನು ಹೇಳಿಕೊಳ್ಳಬಾರದು?? ನಾನಂತೂ ಈಗಾಗಲೇ ಇದರ ಬಗ್ಗೆ ನನ್ನ ಸುತ್ತಲಿರುವವರ ಹತ್ತಿರ ಹಂಚಿಕೊಳ್ಳಲು ಆರಂಭಿಸಿದ್ದೇನೆ. 
ಕೊನೆಯಲ್ಲಿ ವೈಯಕ್ತಿಕವಾಗಿ ಮುಟ್ಟಿನ ಜೊತೆ ನನ್ನ ಪ್ರಯಾಣದ ಮಹತ್ವದ ತಿರುವೊಂದನ್ನು ಹೇಳಬಯಸುತ್ತೇನೆ. Menstrual Cup ನ್ನು ನಾನೀಗ ಕಳೆದ ಆರು ತಿಂಗಳಿಂದ ಉಪಯೋಗಿಸುತ್ತಿದ್ದೇನೆ. ಒಂದು ಚೂರೂ ಸೋರಿಕೆಯಿಲ್ಲದೆ, ಮುಟ್ಟಾಗಿದೆ ಎಂಬ ಸಂಗತಿಯನ್ನೇ ಮರೆಸುವಂತಹ ಒಂದು ಅನುಭವ. ಕಸವನ್ನೇ ಉಂಟು ಮಾಡದೆ ಪರಿಸರ ಸ್ನೇಹಿಯಾದ ಈ ಆವಿಷ್ಕಾರ ಈಗ ಹಲವರನ್ನು ಆಕರ್ಷಿಸುತ್ತಿದೆ. ಹಣಕಾಸಿನ ದೃಷ್ಟಿಯಿಂದಲೂ ಇದು ಲಾಭದಾಯಕ. ಬಟ್ಟೆಯಿಂದ Cup ನವರೆಗಿನ ಈ ನನ್ನ ಪ್ರವಾಸದ ಕುರಿತು ಬರೆಯಬೇಕಾದದ್ದು ಇನ್ನೂ ಬಹಳಷ್ಟಿದೆ. ಶಬರಿಮಲೆಯಂತಹ ವಿವಾದಾತ್ಮಕ ವಿಚಾರಗಳ ಬಗ್ಗೆಯೂ ಬರೆಯಬೇಕಾದದ್ದು ಸಾಕಷ್ಟಿದೆ. ಅದನ್ನೆಲ್ಲ ಇನ್ನೊಮ್ಮೆ ಬರೆಯುತ್ತೇನೆ. ಬರೆಯಲು ನನಗೆ ಮುಜುಗರವಿಲ್ಲ, ಓದಲು ನಿಮಗೆ ಇರದಿದ್ದರೆ ಸಾಕು. 

-ನಿಷಾದ 

Comments

  1. I really commend your effort. I am a Professor myself. I will surely try my best to speed up this campaign.
    Raaghavendra Prasad Shetty @Twitter

    ReplyDelete
  2. "ಹೆಣ್ಣು ಮುಟ್ಟಾಗದಿದ್ದರೆ ಈ ಸೃಷ್ಟಿಯೇ ಇಲ್ಲ, ಸೃಷ್ಟಿಯೇ ಇಲ್ಲವೆಂದಮೇಲೆ ಧರ್ಮ ದೇವರುಗಳೇ ಇರುತ್ತಿರಲಿಲ್ಲ "ಎಂದು ಶಬರಿಮಲೆಯ ವಿಷಯದಲ್ಲಿ ನಾನು tweet ಮಾಡಿದ್ದಾಗ ಇಡೀ 'ಮಡಿ-ಮೈಲಿಗೆ' ಸಮಾಜ ನನ್ನ ಮೇಲೆ ಮುಗಿ ಬಿದ್ದಿತ್ತು ..!! ಅಂದಿಗೆ ಮನಸ್ಸು ಕ್ಷೋಭೆಗೊಂಡಿತ್ತು .. ಇವತ್ತು ನಿಮ್ಮ ಬರಹ ಓದಿದ ಮೇಲೆ ಹಗುರಾಗುತ್ತಿದೆ. ನಿಮ್ಮ ಅನುಭವ, ವಿಚಾರಧಾರೆ ಇನ್ನಷ್ಟು ಹೆಣ್ಮನಸ್ಸುಗಳನ್ನು ಸ್ಪೂರ್ತಿಗೊಳಿಸಲಿ. Thank you

    ReplyDelete

Post a Comment

Popular Posts