ಖಿನ್ನತೆ




ಹಾಗೆಂದರೇನು ಎಂದು ಕೇಳುವವರಿಗಿದು,
ಕಣ್ಣು ಕಾಣುವಷ್ಟೂ ದೂರ ನೀರು,
ಸದ್ದು - ಗದ್ದಲವಿಲ್ಲದೆ 
ತಣ್ಣಗೆ, ಭೀತಿ ಹುಟ್ಟಿಸುವಂತೆ,
ವರ್ಷಗಟ್ಟಲೆ ಹರಿಯುವ ಕೆಂಪು ನೀರು,
ಆ ಜಲ - ಕಾರಾಗೃಹದಲ್ಲಿ ಖೈದಿ ನೀನು!
ಮೂರಂತಸ್ತಿನ ಮಹಲಿನಲ್ಲಿ 
ತಾರಸಿಯ ಮೇಲೆ ನಿಂತು 
ಏಕತಾನತೆಯನ್ನೇ ಮೈದುಂಬಿಕೊಂಡು ಹರಿವ 
ನೀರರಾಕ್ಷಸನನ್ನುಎವೆಯಿಕ್ಕದೆ 
ನೋಡುತ್ತಿರುವ ನೀನು!
ಮುಳುಗುವುದೂ ಇಲ್ಲ, ಬದುಕುವ ಸಾಧ್ಯತೆಯೂ ಇಲ್ಲ,
ಒತ್ತಡ, ನೋವು ಮತ್ತು 
ಉತ್ತರವಿಲ್ಲದ ಸಾವಿರ ಪ್ರಶ್ನೆಗಳು.

ಜಲಪ್ರವಾಹದಲ್ಲಿ ಕೊಚ್ಚಿಹೋಗಬಹುದು ದೇಹ, 

ಆದರೆ,
ಭಾವಪ್ರವಾಹದಲ್ಲಿ ಅಳಿದುಹೋದರೆ 
ಉಳಿಯುವುದು ದೇಹ ಮಾತ್ರ!
ಸಂಘರ್ಷ, ಆತಂಕ ಮತ್ತು ಭಯ.
ಬದುಕದಿದ್ದರೆ ಎಂಬ ಭಯ, 
ಬದುಕಿದರೆ ಹೇಗೆ ಎಂಬ ಭಯ,
ನಿಷ್ಕಾರಣವಾದ, ನಿರರ್ಥಕ
ನಿರ್ಲಜ್ಜ ಭಯ!
ನತದೃಷ್ಟೆ ನೀನು,
ನಿನಗೊಬ್ಬಳಿಗೇ ಕಾಣುವ, ಭಯಪಡಿಸುವ, ಅರ್ಥವಾಗುವ,
ನೀನೊಬ್ಬಳೇ ಅನುಭವಿಸುವ
ಸಾವದು - ಖಿನ್ನತೆ!

-ನಿಷಾದ 


Photo credits: https://theconversation.com/depression-its-a-word-we-use-a-lot-but-what-exactly-is-it-122381

Comments

Popular Posts