ಬದುಕಿನ ಮತ್ತೊಂದು ಮಜಲಿನಲ್ಲಿ- ಚೆನ್ನೈನಲ್ಲಿ


ಬರೋಬ್ಬರಿ ಎರಡು ವರ್ಷಗಳು ಕಳೆದವು ನಾನು ಇಲ್ಲಿ ತೋಚಿದ್ದನ್ನು ಗೀಚಿ!

ನಾನೀಗ ಇರುವುದು ಇಲ್ಲಿ,  ನನ್ನ ಮನೆಯಲ್ಲದಲ್ಲಿ, ಪರವೂರಿನಲ್ಲಿ, ಚೆನ್ನೈಯಲ್ಲಿ.. ಬಾಳು ತನ್ನ ಬುಡಕ್ಕೆ ಬೆಂಕಿ ಹಚ್ಚಿಕೊಂಡು ಚಿಮ್ಮಿದ ರಾಕೆಟ್ಟಿನಂತೆ ಚಲಿಸುತ್ತಿದೆಯೇನೋ ಎಂಬಂತೆ ಭಾಸವಾಗುತ್ತಿದೆ. ಕೌತುಕದ ವಿಷಯವೆಂದರೆ ಇಲ್ಲಿಯವರೆಗೆ, ಇಪ್ಪತ್ಮೂರು ವಸಂತಗಳು ಕಳೆಯುವವರೆಗೂ ಬದುಕು ಬಸವನ ಹುಳುವಿನಂತೆ ತೆವಳಿದ್ದೇ ಇಲ್ಲ! ಅಥವಾ ನನಗೆ ಹಾಗೆ ಅನಿಸಿದ್ದೇ ಇಲ್ಲ... ಕಷ್ಟವೋ- ಸುಖವೋ ಯಾರಾದರೊಬ್ಬರು ಮನೆಯ ಹೊಸ್ತಿಲಲ್ಲಿ ರಂಗೋಲಿ ಬಿಡಿಸಿಡುವವರೇ.. ಕೆಲವೊಮ್ಮೆ ಖುಷಿಯ ಹಸಿರು ಉಸಿರನ್ನು ತುಂಬಿದರೆ ಕೆಲವೊಮ್ಮೆ ಚಿಂತೆಯ ಕಡುನೀಲಿ ಹರಡಿಬಿಡುತ್ತದೆ.. ಒಟ್ಟಿನ್ನಲ್ಲಿ ಆ ದೇವರ ಕೃಪೆಯಿಂದ ಈ ಪಯಣವು ಎಂದೂ  ವರ್ಣಮಯವಾಗೇ ಇದೆ. ಇಂದು ಇಷ್ಟು ದಿನಗಳ ನಂತರ ಕೀಲಿಮಣೆಯಲ್ಲಿ ಕಟಕಟಿಸುತ್ತಿರುವದು ನನ್ನ ಮನೆಯಲ್ಲದ ಮನೆಯ ಬಗ್ಗೆ ಬರೆಯಲು.. ನನ್ನದಲ್ಲದ ಭಾಷೆ, ಸಂಸ್ಕೃತಿ ನನ್ನದಾಗುತ್ತಿರುವ ಕತೆಯನ್ನು ಹೇಳಲು..

 ನಾನೀಗ ವಾಸಿಸುತ್ತಿರುವುದು ಚೆನ್ನೈಯ ಹೃದಯ ಭಾಗದಲ್ಲಿ. ರಾತ್ರಿ ಎರಡಾದರೂ ಬಾಲ್ಕನಿಯಲ್ಲಿ ನಿಂತರೆ ಭರ್ರೆಂದು ಓಡಾಡುವ ವಾಹನಗಳು, ಎಲ್ಲಿಗೆ ಬೇಕಾದರಲ್ಲಿ ಹೋಗುವ ಬಸ್ಸುಗಳು, ರುಚಿ-ಶುಚಿ(?)ಯಾದ ತಿನಿಸುಗಳ ಬಡಿಸುವ ರೆಸ್ಟೋರೆಂಟುಗಳು, ಆಟೋಗಳು ಎಲ್ಲವೂ ಅನತಿ ದೂರದಲ್ಲೇ. ದೂರದಿಂದ ನೋಡಿದರೆ ಬೆಂಕಿಪೊಟ್ಟಣದಂತೆ ಕಾಣುತ್ತದೆ ನಾನಿರುವ ಬಹುಮಹಡಿ ಟವರ್-ಉ. ಸಾಂಪ್ರದಾಯಿಕತೆಗೆ ಹೆಸರಾಗಿರುವ ಈ ಶಹರದಲ್ಲಿ ಇಂತಹ ಕಟ್ಟಡಗಳೂ, ಬೆಂಕಿಪೊಟ್ಟಣದಂತಹ ಮನಸುಳ್ಳವರೂ ಕಡಿಮೆಯೇ. ಸೂರ್ಯನ ತುಸು ಜಾಸ್ತಿ ಕೃಪೆಯಿಂದ ಹೊಳೆಯುವ ಬಣ್ಣ, ಮುಡಿಯಲ್ಲಿ  ಮಲ್ಲಿಗೆ ಮತ್ತು ಕಣಗಿಲೆ (ಬಹುಶಃ), ಕಿವಿಯಲ್ಲಿ ತೂಗುವ ಝುಮಕಿ, ಎಣ್ಣೆ ಹಾಕಿ ಬಾಚಿದ ಜಡೆಗಳು ಮತ್ತು ಕಾಡಿಗೆ  ಇಲ್ಲಿ ಸಾಮಾನ್ಯ. ಆಧುನಿಕತೆಯ ಗಾಳಿ ಬೀಸಿದಲ್ಲಿ ಜೀನ್ಸ್ ಕಾಣಬಹುದಾದರೂ, ಚೆನ್ನೈಯ ಸೊಬಗು ಇರುವದು ಮಲ್ಲಿಗೆ- ಗಂಧದ ಪರಿಮಳದಲ್ಲೇ. ಇಲ್ಲಿ ಎಲ್ಲವೂ ತಮಿಳುಮಯ; ಉತ್ತರದಿಂದ ವಲಸೆ ಬಂದ ಬಹುದೊಡ್ಡ ಜನಸಂಖ್ಯೆ ಚೆನ್ನೈಗೆ ವೈವಿಧ್ಯತೆಯನ್ನೂ, ತಕ್ಕಮಟ್ಟಿಗಿನ ಸಹಿಷ್ಣುತೆಯನ್ನು ಕಲಿಸಿದೆಯಾದರೂ, ತಮಿಳು ಕಲಿಯದಿದ್ದರೆ ಜೀವನ ಸುಲಭವಿಲ್ಲವಿಲ್ಲಿ. ನಾನೂ ವಾಂಗ- ಪೋಂಗದ ಭರದಲ್ಲಿ ಕನ್ನಡಮ್ಮನ ಮಡಿಲನ್ನು ಮರೆಯದಿದ್ದರೆ ಅಷ್ಟೇ ಪುಣ್ಯ! ಚೆನ್ನೈ ಸುಸಂಸ್ಕೃತ, ಶ್ರೀಮಂತ ಮತ್ತು ತುಸು ಜಾಸ್ತಿಯೆನಿಸುವಂತಹ ರಿಸರ್ವರ್ಡ್ ಮೈಂಡೆಡ್ ಮಂದಿ ಮತ್ತು ಕಪ್ಪು ಬಣ್ಣದ, ವಿಶಾಲ ಹೃದಯದ ಕಾರ್ಮಿಕ ವರ್ಗದ ಮೇಳ. ಎಲ್ಲೆಂದರಲ್ಲಿ ರಾರಾಜಿಸುವ 'ಅಮ್ಮ'ನ ಕಟೌಟುಗಳು, ಬ್ಯಾನರ್ಗಳೂ ಬಹುಶಃ  ನಗರದ ಅವಿಭಾಜ್ಯ ಅಂಗವೇ ಆಗಿ ಹೋಗಿದೆ. ಚಲನಚಿತ್ರವಂತೂ ಇಲ್ಲಿನ ದಶಕಗಳ ಸಮೂಹ ಸನ್ನಿ; ಒಂದು ಸಲ ಸೂರ್ಯ ನಟಿಸಿದ  first day, first show ಸಿನೆಮಾ ನೋಡಿ ಮೂರು ದಿನ  ತಲೆನೋವಿನಲ್ಲಿ ಮುಲುಗಿದ ಮೇಲೆ ಇಲ್ಲಿನ ಜನರ ರಸಿಕತೆ ನನಗೆ ರೋಸಿಯೇ ಹೋಗಿದೆ. ವಿಶ್ವ ವಿಖ್ಯಾತ ಮರೀನಾ ತಟ ತನ್ನ ಮಲಿನತೆಗೇ  ಪ್ರಸಿಧ್ಧ ಇತ್ತೀಚೆಗೆ! ಆದರೂ ತಡ ಸಂಧ್ಯೆಯ ತಂಗಾಳಿಯಲಿ ಬೆಸಂತ್ ನಗರದ ಭೋರ್ಗರೆವ ಅಲೆಗಳು, ನಗರದ ಅಂಚಿನಲ್ಲಿ ಶಾಂತವಾಗಿರುವ ತಿರುವಾಯಿಂಮೀರ್ ತಟದ ಗಂಭೀರ ಸೌಂದರ್ಯ, ಮೇಲ್ಮಧ್ಯಮ ಮತ್ತು ಮೇಲ್ವರ್ಗದ ನಿವಾಸಿಗಳ ಅಚ್ಚು ಮೆಚ್ಚಿನ ತಾಣ. ತಿಂಗಳ ಕೊನೆಯಲ್ಲಿ ಸಂಬಳ ಖಾಲಿಯಾದಾಗ ಬೀಚ್ಗಳಷ್ಟು ಪ್ರಿಯವಾದ ಔಟಿಂಗ್ ತಾಣ ಮತ್ತೊಂದಿಲ್ಲ!

ನನ್ನದಲ್ಲದ ಊರು ನನ್ನದಾಗಿದ್ದು ಇಲ್ಲಿಯ ಜನರ  ಪ್ರೀತಿಯಿಂದ, ಸಿಮೆಂಟು ಕಟ್ಟಡಗಳಲ್ಲಿಯೂ ಕಳೆದುಕೊಳ್ಳದ  ತನ್ನತನದಿಂದ, ಬಿಸಿಲಿನಿಂದ, ಬೆವರಿನಿಂದ, ಇಲ್ಲಿನ  ಭಾಷಾಭಿಮಾನದಿಂದ,  ಸಂಸ್ಕೃತಿಯಿಂದ, ಒರಟುತನದಿಂದ, ಸಂಗೀತದಿಂದ ಮತ್ತು ಆಧುನಿಕತೆಯೊಂದಿಗೆ ಬೆರೆಯಲು ಪ್ರಯತ್ನಿಸುತ್ತಿರುವುದರಿಂದ ಏರ್ಪಡುವ ಘರ್ಷಣೆಯಿಂದ ಮತ್ತು ಸ್ವಲ್ಪ ಮಟ್ಟಿಗಿನ ನನ್ನ ಅನಿವಾರ್ಯತೆಯಿಂದ!

ಚೆನ್ನೈ ಕೂಡಾ ತನ್ನಂಚಿನ್ನಲ್ಲಿ ಚಾಚಿಕೊಂಡಿರುವಂತಹ ಸಾಗರವೇ. ನನ್ನ ಶಬ್ದಗಳು ಹುಟ್ಟುತ್ತಿರುವ ಸೂರ್ಯನ ಸೇಬುವೆಂದು ಭ್ರಮಿಸಿ  ಹೊರಟ ಹನುಮಂತನ ಪ್ರಯತ್ನದಂತೆಯೇ, ಎಷ್ಟು ಬರೆದರೂ ಅಪೂರ್ಣ ಮತ್ತು ಅಸಫಲ! ಆದರೂ ಬರೆಯುವ ತೆವಲು ಇಷ್ಟು ಬರೆಸಿದೆ ನೋಡಿ..

- ನಿಷಾದ

Photo credits: https://www.relocatemagazine.com/articles/ikan-report-india-focus-on-chennai

Comments

  1. ಕನ್ನಡದಲ್ಲಿ ಇಷ್ಟೊಂದು ಸುಂದರವಾಗಿ ಬರೆಯುತ್ತೀಯಲ್ಲ ಮಗಳೇ, ಅದನ್ನೇಕೆ ಸಿದ್ಧಿ ಮಾಡಿಕೊಳ್ಳಬಾರದು ನೀನು? ಶಾರದೆಯ ಅನುಗ್ರಹವಿದೆ ನಿನಗೆ. ಅದನ್ನು ಮುಂದುವರಿಸು.

    ReplyDelete

Post a Comment

Popular Posts