ಕಾಯಕವೇ ಕೈಲಾಸ..

ಕರಿ ಕೋಟು, ಕತ್ತಿಗೆರಡು ಬಿಳಿ ಪಟ್ಟಿ
ಏನೆಂದು ಕೇಳಿದರೆ, ಹೇಳಿದ್ದು-
’ಅವು ಎರಡು ನಾಲಗೆಗಳಂತೆ..!!’
ಮಾಡುವ ಕೆಲಸವನ್ನು ಪ್ರೀತಿಸಬೇಕು;
ಕಡಿಯುವುದಾಗಿದ್ದರೂ... ಧರ್ಮವ್ಯಾಧನಂತೆ...!!
’ಕಕ್ಷಿದಾರನಿಗಾಗಿ ವಾದ’, ವೃತ್ತಿಧರ್ಮ..
ಎಷ್ಟೊಂದು ಬಗೆಯ ಕಕ್ಷಿದಾರರು!
ಬಡವ, ಬಲ್ಲಿದ, ಕುಡುಕ,
ಕೊಲೆಗಡುಕ, ಸಂನ್ಯಾಸಿ, ಭಿಕ್ಷುಕ...!!
ಎಲ್ಲರಿಗೂ ನ್ಯಾಯ ಒದಗಿಸಲು
ಹೊರಟ ನ್ಯಾಯವಾದಿ...
ಬೆಳಗ್ಗೆ ಹೊತ್ತು ಹುಟ್ಟುವಾಗಿನಿಂದ
ನಿದ್ದೆ ಅಪ್ಪಿಕೊಳ್ಳುವವರೆಗೆ,
ಕರಿಯ ಬಣ್ಣದ್ದೇ ಕಾರು-ಬಾರು!
ಇವರಿಗೆಲ್ಲ ದೇವರಂತೆ,
ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿದ,
ಕೈಯಲ್ಲಿ ತಕ್ಕಡಿ ಹಿಡಿದ
ಗ್ರೀಸ್ ದೇಶದ ಗಾಂಧಾರಿ..
ಮನದಲ್ಲೇ ಲೆಕ್ಕ ಹಾಕುತ್ತಿದ್ದೆ..
ಲಕ್ಷ-ಲಕ್ಷ ಸಂಖ್ಯೆಯ ಧರ್ಮವ್ಯಾಧರಿಗೆಲ್ಲ
ಮೋಕ್ಷ ಕರುಣಿಸುವ ದೇವರ
ಶಕ್ತಿಯನ್ನು...!!
ದೂರದಿಂದ ಹಾಡೊಂದು ತೇಲಿ ಬಂತು-
"ಇದು ಎಂಥಾ ಲೋಕವಯ್ಯಾ..."
ನಕ್ಕು,
ಕೋರ್ಟಿಗೆ ಹೋಗಲು ಎದ್ದು ನಿಂತೆ..!

-ನಿಷಾದ

Comments

  1. ತುಂಬಾ ಚೆನ್ನಾಗಿದೆ ..
    .ಇಷ್ಟ ಆಯ್ತು ....ಬರೀತಾ ಇರಿ

    ReplyDelete

Post a Comment

Popular Posts