ಅರಿವು

ಇಂದೇಕೋ ನಿನ್ನ ನೆನಪೇ ಆಗದು,
ನಿನ್ನ ನೆನಪೇ ನೆನಪಾಗಿ ಹೋಯಿತೇನೋ..
ಯಾಕೀ ಗೊಂದಲ...? ಯಾಕೀ ದ್ವಂದ್ವ...?
ಅಸ್ಪಷ್ಟ ಭಾವಗಳು,
ಒಳಬೇಗುದಿಯ ಚೆಲ್ಲಿ, ಹೆಪ್ಪುಗಟ್ಟಿ
ಕಲೆಯಾಗಿ ಹೋಯಿತೇ?
ನಿನ್ನ ನೆನಪುಗಳು, ನಿನ್ನವೇ ನೆಪಗಳಲ್ಲಿ
ಗೋರಿಯಾಗಿ ಹೋಯಿತೇ?
ಪ್ರೀತಿಲತೆ ಚಿಗುರಿ ಹೂ ಬಿಡುವ
ಮುನ್ನ ಬಾಡಿ ಹೋಯಿತೇ?
ಸಣ್ಣ ನಗು, ಅಣಕು..
ಪ್ರೀತಿಲತೆಗೆ ಮೂಲವೊಂದು
ಭಾವಬೀಜ ಬೇಡವೇ?
ಬೆಳದಿಂಗಳ ಇರುಳಿನಲಿ,
ಬೆಚ್ಚನೆಯ ಜೊತೆಯಾಗಿ,
ಕೊಳಲಗಾನದಲಿ ವಿಹರಿಸುವ...
ರಾಧೇ ನಾನಾಗಿ, ಸರ್ವಸ್ವ ನಿನಗಾಗಿ
ಪ್ರೆಮರಸ ಸುಧೆಯಲ್ಲಿ ತೇಲಾಡುವ...
ಮನಮೋಹನ.. ನಿನ್ನೆದುರು ಕುಳಿತು ಕಣ್ಮುಚ್ಚಿ..
ಕರೆವ ಕನಸು ಚೂರಾಗಿ!!!
ಇಲ್ಲ, ರಾಧೆಯಾಗಲಾರೆ,
ನಾನೆಂದೂ ರಾಧೆಯಾಗಲಾರೆ...
ಮೋಹನನು ನೀನಲ್ಲವಲ್ಲ....!!!!
-ನಿಷಾದ

Comments

Popular Posts